ತಾಲ್ಲೂಕಿನ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಸಲಹೆ ಮಾಡಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸುವಂತೆ ಶಾಸಕರು ಹೇಳಿದಾಗ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ವಿರೋಧ ವ್ಯಕ್ತಪಡಿಸಿದರು. ಸಧ್ಯದ ಪರಿಸ್ಥಿತಿಯಲ್ಲಿ ಅಷ್ಟು ಹಣ ಖರ್ಚು ಮಾಡಿ ಈಜುಕೊಳ ನಿರ್ಮಿಸುವುದು ಬೇಡ. ಅದಕ್ಕೆ ಬದಲಾಗಿ ಪಟ್ಟಣದಲ್ಲಿ ಬೀದಿ ದೀಪ ಅಳವಡಿಸಲು, ಸ್ವಚ್ಛತೆ ಕಾಪಾಡಲು, ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು, ರಸ್ತೆ, ಚರಂಡಿ ದುರಸ್ತಿ ಮಾಡಲು ಬಳಸಿಕೊಳ್ಳೋಣ ಎಂದು ಸಲಹೆ ಮಾಡಿದರು.
ಅದಕ್ಕೆ ಶಾಸಕ ರಮೇಶ್ ಕುಮಾರ್, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಪುರಸಭೆ ಅಥವಾ ನಗರ ಸಭೆಗೆ ಸೇರಿದ ಈಚುಕೊಳ ನಿರ್ಮಿಸಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅದರ ಅಗತ್ಯವಿದೆ. ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ ಈಜುಕೊಳವೂ ಸೇರುತ್ತದೆ. ವಿರೋಧ ವ್ಯಕ್ತಪಡಿಸುವುದು ಬೇಡ. ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಕಳುಗಿಸಿ, ಅವರು ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿರೋಧಗಳ ನಡುವೆ ಅಭಿವೃಧ್ದಿ ಕುಂಠಿತಗೊಳ್ಳುತ್ತಿದೆ. ಹಳೆ ಬಸ್ ನಿಲ್ದಾಣದಲ್ಲಿ ರವೀಂದ್ರ ಕಲಾಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವರು ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಪಟ್ಟಣದ ಸರ್ಕಾರಿ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 400 ವಿದ್ಯಾರ್ಥಿಗಳು ದಾಖಲಾಗಿದ್ದು, ಕಟ್ಟಡ ಹಾಗೂ ಮೂಲ ಸೌಕರ್ಯದ ಕೊರತೆ ಇದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥ ಮಾದರಿ ಶಾಲಾಭಿವೃದ್ಧಿಗೆ ಎಲ್ಲರು ಸಹಕರಿಸಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಮಾಡಬೇಕು. ಯಾವುದೇ ಕಾರಣಕ್ಕೂ ಸದಸ್ಯರ ಅವಗಣನೆ ಮಾಡಬಾರದು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ 13 ಸದಸ್ಯರು ಕೈ ಎತ್ತುವುದರ ಮೂಲಕ ಪುರಸಭೆ ಕೈಗೊಂಡ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಎಂಜಿನಿಯರ್ ನಾಗರಾಜ್, ಕಂದಾಯ ಅಧಿಕಾರಿ ವಿ.ನಾಗರಾಜ್ ಮತ್ತು ಸದಸ್ಯರು ಇದ್ದರು.