ಶ್ರೀನಿವಾಸಪುರ: ಪಟ್ಟಣದಲ್ಲಿ ಭಾನುವಾರ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕನಕ ಸಮುದಾಯ ಭವನದ ಸಮೀಪ ವಿಶೇಷವಾಗಿ ನಿರ್ಮಿಸಲಾಗಿದ್ದ ವಿಶಾಲವಾದ ಪೆಂಡಾಲ್ ಕೆಳಗಿನ ಭವ್ಯ ವೇದಿಕೆಯಲ್ಲಿ, ತಿರುಪತಿಯಿಂದ ತರಲಾಗಿದ್ದ ದೇವರ ವಿಗ್ರಹಗಳಿಗೆ ಪುಷ್ಪಾಲಂಕಾರ ಮಾಡಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನ ಕಲ್ಯಾಣ ಮಹೋತ್ಸವ ಕಣ್ತುಂಬಿಕೊಂಡರು. ಕಲ್ಯಾಣೋತ್ಸವದ ನಡುವೆ ಭಕ್ತಾದಿಗಳಿಂದ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿತ್ತು. ತಿರುಪತಿಯಿಂದ ಆಗಮಿಸಿದ್ದ ಆಗಮ ಪಂಡಿತರು ಕಲ್ಯಾಣೋತ್ಸವ ನೆರವೇರಿಸಿದರು. ವೇದ ಪಂಡಿತ ಶೇಷಾದ್ರಿ ರಾಷ್ಟ್ರಾಶೀರ್ವಾದ ಮಾಡಿದರು.
ಕಲ್ಯಾಣೋತ್ಸವದ ಬಳಿಕ, ಭಾಗವಹಿದ್ದ ಎಲ್ಲರಿಗೂ ತಿರುಪತಿ ಲಾಡು ವಿತರಿಸಲಾಯಿತು.
ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ರಾಜಶೇಖರರೆಡ್ಡಿ, ಶಂಕರೇಗೌಡ, ನಾರಾಯಣರೆಡ್ಡಿ, ಶಿವಣ್ಣ, ಮಂಜುನಾಥ, ಮುನಿರೆಡ್ಡಿ, ಮುಳ್ಳಳ್ಳಿ ಚೌಡರೆಡ್ಡಿ, ರಾಜಣ್ಣ, ಯಲ್ದೂರು ಶಿವಣ್ಣ, ಶ್ರೀರಾಮ್ ಉತ್ಸವದ ನೇತೃತ್ವ ವಹಿಸಿದ್ದರು.
ರಸ ಸಂಜೆ: ಸಂಜೆ ಜಬರ್ದಸ್ತ್ ಭಾಸ್ಕರ್ ತಂಡದಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.