ಶ್ರೀನಿವಾಸಪುರ : ಹೊನ್ನೇರಿನ ವಿಶೇಷತೆ ಎಂದರೆ ಸೂರ್ಯೋದಯಕ್ಕೆ ಮುನ್ನ ರೈತರು ತಮ್ಮ ಎತ್ತುಗಾಡಿ ಹಾಗು ಕೃಷಿ ಪರಿಕರಗಳನ್ನು ನೀರಿನಿಂದ ತೊಳೆದು ಸ್ವಚ್ಚಗೊಳಿಸುತ್ತಾರೆ. ಬಳಿಕ ಎತ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ.ಬಳಿಕ ನೊಗ ಹೂಡಿದ ಎತ್ತುಗಳು ಮಂಗಳ ವಾದ್ಯಗಳೊದಿಗೆ ಮೆರವಣಿಗೆ ನಡೆಸಲಾಗುತ್ತದೆ.ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನಡಿ ಬರೆಯುತ್ತಾರೆ.
ಶ್ರೀನಿವಾಸಪುರ ತಾಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಹೊಸ ವರ್ಷದ ಕೃಷಿ ಚಟುವಟಿಕೆಯ ಮೊದಲ ಹೆಜ್ಜೆ ಎಂದೇ ಬಾವಿಸಿ ಹೊನ್ನೇರು ಕಟ್ಟುವ ಸಂಪ್ರದಾಯ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.
ಗ್ರಾಮದ ಪಟೇಲ್ ವೆಂಕಟೇಶ್ಗೌಡ ಪತ್ರಿಕೆಯೊಂದಿಗೆ ಮಾತನಾಡಿ ತಲೆ ತಲಾಂತರಗಳಿಂದ ಹೊನ್ನೇರು ಕಟ್ಟುವ ಸಂಪ್ರದಾಯವಿದೆ.ನಾವೂ ಸಹ ಅದೇ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ . ಇಂತಹ ಆಚರಣೆಗಳಿಂದ ಸಿಗುವ ಖುಷಿ ಹಾಗೂ ನೆಮ್ಮದಿ ಬೇರೆ ಯಾವುದರಲ್ಲೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಗ್ರಾಮದ ರೈತರಾದ ಸಂಪತ್ಕುಮಾರ್,ಗೋಪಿ, ರಾಮೇಗೌಡ,ಚಲಪತಿ, ಮಂಜುನಾಥ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.