ಶ್ರೀನಿವಾಸಪುರ: ತಾಲ್ಲೂಕಿನ ವಿಷ್ಣು ದೇವಾಲಯಗಳಲ್ಲಿ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ರೋಣೂರು ಗ್ರಾಮದ ಪುರಾತನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಹೊರಗಡೆ ವಿಶೇಷವಾಗಿ ನಿರ್ಮಿಸಲಾಗಿದ್ದ ವೈಕುಂಠ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿದ ಭಕ್ತಾದಿಗಳು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು.
ದರ್ಶನ ಪಡೆದ ಎಲ್ಲರಿಗೂ ಉಚಿತ ಲಾಡು ವಿತರಿಸಲಾಯಿತು. ವಿವಿಧ ಸಂಘ ಸಂಸ್ಥೆಗಳಿಂದ ದೇವರ ದರ್ಶನ ಪಡೆದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ಶ್ರೀನಿವಾಸಪುರದ ಸಪ್ತಸ್ವರ ಸಂಗೀತ ವಿದ್ಯಾಲಯದ ಸಂಸ್ಥಾಪಕಿ, ವಿದುಷಿ ಮಾಯಾ ಬಾಲಚಂದ್ರ ಮತ್ತು ಸಂಗಡಿಗರು ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ತಾಲ್ಲೂಕಿನ ಗನಿಬಂಡೆ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಂದಲೂ ಜನರು ಆಗಮಿಸಿ ದೇವರ ದರ್ಶನ ಪಡೆದರು. ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಲ್ದೂರು ಗ್ರಾಮದ ಕೋದಂಡರಾಮಸ್ವಾಮಿ ದೇವಾಲಯ, ಹೊಸಕೋಟೆ ಗ್ರಾಮದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಸಿ.ಹೊಸೂರು ಗ್ರಾಮದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ವೈ.ಹೊಸಕೋಟೆ ಗ್ರಾಮದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಮಣಿಗಾನಹಳ್ಳಿ ಗ್ರಾಮದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ, ಹಳೆಪೇಟೆ ನರಸಿಂಹಸ್ವಾಮಿ ದೇವಾಲಯಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಮ ಮಂದಿರದಲ್ಲಿ ರಾಮನ ವಿಗ್ರಹಕ್ಕೆ ವೆಂಕಟರಮಣಸ್ವಾಮಿ ಅಲಂಕಾರ ಮಾಡಲಾಗಿತ್ತು. ಜನರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.