ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸ್ಥಗಿತ ಆದೇಶ ವಾಪಸ್ಸು ಪಡೆದು ಟೆಮೊಟೋ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ-26: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಸ್ಥಗಿತ ಮಾಡಿರುವ ಆದೇಶವನ್ನು ವಾಪಸ್ಸು ಪಡೆದು ಟೆಮೊಟೋ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಬಗೆಹರಿಸಿ ಹದಗೆಟ್ಟಿರುವ ಜಿಲ್ಲಾಡಳಿತವನ್ನು ಸರಿಪಡಿಸಬೇಕೆಂದು ರೈತಸಂಘದಿಂದ ಉಸ್ತುವಾರಿ ಸಚಿವರಾದ ಮುನಿರತ್ನ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವರು, ಕೇಂದ್ರ ಸರ್ಕಾರ ಎಂ.ಎಸ್.ಪಿ ಧರದಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ 3377ರೂ ಧರದಲ್ಲಿ ಪ್ರತಿ ರೈತರಿಂದ 50 ಕ್ವಿಂಟಾಲ್ ಖರೀದಿ ಮಾಡುವ ಆದೇಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು. ಆದರೆ, ನೂರೊಂದು ನೆಪ ಹೇಳಿ ರಾಜ್ಯ ಸರ್ಕಾರ ಶೇಕಡ 50%ರಷ್ಟು ಖರೀದಿ ಆದ ನಂತರ ರಾಜ್ಯದ ಎಲ್ಲಾ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಮುಖಾಂತರ ದಲ್ಲಾಳಿಗಳಿಗೆ ಅನುಕೂಲವಾಗುವ ರೀತಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ವಿವರಣೆ ನೀಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲಾಧ್ಯಂತ ಸರ್ಕಾರಿ ಕಛೇರಿಗಳು ದಲ್ಲಾಳಿಗಳ ಕಛೇರಿಯಾಗಿ ಮಾರ್ಪಟ್ಟಿವೆ. ಹಣವಿಲ್ಲದೆ ಜನಸಾಮಾನ್ಯರ ನೆರಳು ಸಹ ಕಛೇರಿಗಳ ಒಳಗಡೆ ಬೀಳುವಂತಿಲ್ಲ ಅಷ್ಟರಮಟ್ಟಿಗೆ ಸರ್ಕಾರಿ ಕಛೇರಿಗಳು ಹದಗೆಟ್ಟಿರುವ ಜೊತೆಗೆ ರೈತರ ಜೀವನಾಡಿಯಾಗಿರುವ ತಾಲ್ಲೂಕು ಕಛೇರಿಯಲ್ಲಿ ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ ಗಾಂಧಿ ನೋಟು ಕೊಡುವ ಜೊತೆಗೆ ಪಿ ನಂಬರ್ ದುರಸ್ಥಿ ಹೆಸರಿನಲ್ಲಿ ಲಕ್ಷ ಲಕ್ಷ ಬಡವರ ರಕ್ತ ಹೀರುವ ಇಲಾಖೆಗಳಾಗಿ ಅಧಿಕಾರಿಗಳು ಸೃಷ್ಠಿಮಾಡಿಕೊಂಡಿದ್ದಾರೆಂದು ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕೆಂದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹತ್ತಾರು ವರ್ಷಗಳಿಂದ ರೈತರ ಜೀವನಾಡಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸುವಂತೆ ಸರ್ಕಾರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ನೀಡಿದರೂ ಸಮಸ್ಯೆ ಬಗೆಹರಿಸದೇ ಪ್ರತಿ ವರ್ಷ ಟೆಮೊಟೋ ಅವಕ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ವಾಹನ ಸಂಚಾರದಿಂದ ರೈತರಿಗೆ ನಷ್ಟವಾಗುತ್ತಿದೆ. ಜಿಲ್ಲಾಡಳಿತ ಕೃಷಿ ಉತ್ಪನ್ನ ಆಡಳಿತ ಮಂಡಳಿ ಈಗಾಗಲೇ ಸ್ಥಳ ಗುರುತಿಸಿ ಸರ್ಕಾರದ ಮಟ್ಟದಲ್ಲಿ ಕಡತ ಇರುವುದರಿಂದ ಕಂದಾಯ ಸಚಿವರ ಬಳಿ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ, ಉಸ್ತುವಾರಿ ಸಚಿವರಾದ ಮುನಿರತ್ನ ಅವರು ರಾಗಿ ಖರೀದಿ ಸ್ಥಗಿತದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸುವ ಜೊತೆಗೆ ಟೆಮೊಟೋ ಮಾರುಕಟ್ಟೆಯ ಜಾಗದ ಸಮಸ್ಯೆ ಹಾಗೂ ಸರ್ಕಾರಿ ಕಛೇರಿಗಳ ಅವವ್ಯಸ್ಥೆಯನ್ನು ಸರಿಪಡಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ನಗರ ಸಂಚಾಲಕ ಮಂಗಸಂದ್ರ ನಾಗೇಶ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಪುತ್ತೇರಿ ರಾಜು, ಕುವಣ್ಣ, ಜಿಲ್ಲಾ ಕಾರ್ಯದಕ್ಷ ವಕ್ಕಲೇರಿ ಹನುಮಯ್ಯ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲವಳ್ಳಿ ಪ್ರಭಾಕರ್, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.