


ಸಪ್ಟೆಂಬರ್ 4, 2023, ಸ್ನೇಹಾಲಯ ಸೈಕೋ-ಸೋಷಿಯಲ್ ರಿಹಾಬಿಲಿಟೇಶನ್ ಸೆಂಟರ್ ಫಾರ್ ಮೆನ್ ಮತ್ತು ವುಮೆನ್, ಮಂಜೇಶ್ವರನಲ್ಲಿ ‘ದಿ ಕಲರ್ ಓಣಂ 2K23’ ಅನ್ನು ಅಪಾರ ಉತ್ಸಾಹ ಮತ್ತು ವಿಜ್ರಂಭಣೆಯಿಂದ ಆಚರಿಸಲಾಯಿತು. ಉತ್ಸಾಹ ಹಾಗೂ ಸಂತೋಷದ ಅಬ್ಬರಗಳು ಮುಗಿಲೇರಿದಾಗ ಸ್ನೇಹಾಲಯದ ಸಂಪೂರ್ಣ ವಾತಾವರಣವೇ ರೋಮಾಂಚಕ ಬಣ್ಣಗಳ ಸ್ವರ್ಗವಾಗಿ ಮಾರ್ಪಾಡಾಯಿತು. ಈ ವಿಶಿಷ್ಟ ಕಾರ್ಯಕ್ರಮವು ದೇವರ ನಾಡಿನ ಪವಿತ್ರ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಜೊತೆಗೆ ಸ್ನೇಹಾಲಯದ ನಿವಾಸಿಗಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಏರ್ಪಡಿಸಲಾಯಿತು
ಕೇರಳದ ಸುಗ್ಗಿಯ ಹಬ್ಬವಾದ ಓಣಂ ಅನ್ನು ದಕ್ಷಿಣ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದಾಗ್ಯೂ, ಸ್ನೇಹಾಲಯದ ನಿವಾಸಿಗಳು ಮತ್ತು ಸಿಬ್ಬಂದಿಗಳು ಒಗ್ಗೂಡಿ ಭಾಗವಹಿಸಿದ ಕಾರಣ ಎಲ್ಲರಿಗೂ ಒಂದು ಅವಿಸ್ಮರಣೀಯ ಅನುಭವವನ್ನು ಸೃಷ್ಟಿಸಿತು. ಪುನರ್ವಸತಿ ಕೇಂದ್ರದ ಆವರಣವನ್ನು ಸಾಂಪ್ರದಾಯಿಕ ಓಣಂ ಅಲಂಕಾರದಿಂದ ಅಲಂಕರಿಸಲಾಗಿತ್ತು, ಇದರಲ್ಲಿ ಹೂವಿನ ರಂಗೋಲಿಗಳು (ಪೂಕಳಂಗಳು) ಮತ್ತು ವರ್ಣರಂಜಿತ ಹೂವಿನ ಅಲಂಕಾರಗಳು ಸೇರಿದ್ದವು. ನಿವಾಸಿಗಳು ಸಾಂಪ್ರದಾಯಿಕ ಕೇರಳದ ಉಡುಪನ್ನು ಧರಿಸಿದ್ದರು, ಮಹಿಳೆಯರು ಸೊಗಸಾದ ಸೀರೆಗಳನ್ನು ಧರಿಸಿದ್ದರು ಮತ್ತು ಪುರುಷರು ಬಿಳಿ ಧೋತಿ ಮತ್ತು ಶರ್ಟ್‌ಗಳನ್ನು ಧರಿಸಿದ್ದರು.
ಈ ಸಂಧರ್ಬದಲ್ಲಿ ಮಾತಾನಾಡಿದ ಸ್ನೇಹಾಲಯದ ನಿರ್ದೇಶಕರಾದ ಬ್ರೋ ಜೋಸೆಫ್ ಕ್ರಾಸ್ತಾ ಅವರು ‘ದಿ ಕಲರ್ ಓಣಂ 2K23’ ಆಚರಣೆಯ ಯಶಸ್ಸಿನ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು, “ಓಣಂ ಒಗ್ಗಟ್ಟಿನ ಮನೋಭಾವ ಮತ್ತು ಐಕ್ಯತೆಯನ್ನು ಪ್ರತಿನಿಧಿಸುವ ಒಂದು ಮನೊರಂಜಕ ಉತ್ಸವವಾಗಿದೆ ಹಾಗೂ ಇಂತಹ ಹಬ್ಬಗಳು ನಮ್ಮ ನಿವಾಸಿಗಳ ಮಾನಸಿಕ ಯೋಗಕ್ಷೇಮಕ್ಕೆ ಧನಾತ್ಮಕ ಕೊಡುಗೆಯನ್ನು ನೀಡುತ್ತದೆ ಹಾಗೂ ಅವರ ಮುಖದಲ್ಲಿನ ನಗುವನ್ನು ತರುವ ಒಂದು ಮಾಧ್ಯಮವಾಗಿದೆ ಎಂದು ನುಡಿದರು”
ಹಬ್ಬದ ಸಂಭ್ರಮಕ್ಕೆ ಪೂರಕವಾಗಿ ‘ತಿರುವತಿರ ಕಲಿ’ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಆಕರ್ಷಕವಾದ ನೃತ್ಯದ ಚಲನೆಗಳು ಮತ್ತು ಸಿಂಕ್ರೊನೈಸ್ ಮಾಡಿದ ಹೆಜ್ಜೆಗಳಿಂದ ನರ್ತಕಿಯರು ಪ್ರೇಕ್ಷಕರ ಹ್ರದಯಗಳನ್ನು ಸೂರೆಗೈದರು. ಅನಂತರ ಓಣಂನ ರುಚಿಕರವಾದ ಸಾಂಪ್ರದಾಯಿಕ ಔತಣವನ್ನು ವಿತರಿಸಲಾಯಿತು.




















