ಸರಳ ಪತ್ರಿಕಾ ದಿನಾಚರಣೆ ಎಂ.ಜಿ.ಪ್ರಭಾಕರ್‌ಗೆ ಸನ್ಮಾನ ಪತ್ರಕರ್ತರು ವೃತ್ತಿ ಧರ್ಮ ಮರೆಯಬಾರದು ಮುನಿರಾಜು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಪತ್ರಿಕಾ ವೃತ್ತಿ ಅತ್ಯಂತ ಪವಿತ್ರವಾಗಿದ್ದು , ಜನತೆಗೆ ಸತ್ಯ ಸಂಗತಿ ತಿಳಿಸುವಾಗ ನಾವು ನಿಷ್ಟೂರತೆಯಿಂದ ಇರಬೇಕು , ಸಮಾಜಕ್ಕಾಗಿ ನಾವು ಎಂಬ ಭಾವನೆ ಇರಬೇಕು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ತಿಳಿಸಿದರು . ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲಾದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು . ಪತ್ರಕರ್ತರ ಕಲ್ಯಾಣಕ್ಕಾಗಿ ಸರ್ಕಾರ ಮತ್ತಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು , ಗ್ರಾಮೀಣ ಪತ್ರಕರ್ತರ ನೆರವಿಗೂ ಬರಬೇಕು , ಪತ್ರಕರ್ತರನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು . ಕೋವಿಡ್ ಸಂದರ್ಭದಲ್ಲಿ ಸರಳವಾಗಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದ್ದು , ಮುಂದಿನ ದಿನಗಳಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು . ಆತ್ಮಾವಲೋಕನ ಪತ್ರಕರ್ತರಿಗೆ ಅಗತ್ಯ ಪತ್ರಕರ್ತರು ಸಾಮಾಜಿಕ ಬದ್ದತೆ ಹೊಂದಿ ಪತ್ರಿಕೆಗಳ ವಿಶ್ವಾಸಾರ್ಹತೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಎಂ.ಜಿ.ಪಭಾಕರ ಹೇಳಿದರು .
ಸಾಮಾಜಿಕ ಜಾಲ ತಾಣಗಳ ಅಬ್ಬರದಲ್ಲೂ ಪತ್ರಿಕೆಗಳು ಇನ್ನು ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟ ಅವರು , ಇದನ್ನು ಜತನದಿಂದ ಕಾಪಾಡಿಕೊಂಡು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತ ಮೇಲಿದೆಯೆಂದರು . ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಪತ್ರಕರ್ತರ ಜೀವನ ನಿರ್ವಹಣೆ , ಪತ್ರಿಕೆಗಳ ಮೇಲ್ವಿಚಾರಣೆ ಸವಾಲು ಎದುರಿಸುವುದರ ಜೊತೆಗೆ ಓದುಗರ ನಂಬಿಕೆ ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ . ಸಾಮಾಜಿಕ ಜಾಲ ತಾಣದ ಸುದ್ದಿಗಳಿಗಿಂತಲೂ ನಂಬಿಕೆಗೆ ಅರ್ಹವಾದ ಸುದ್ದಿಗಳನ್ನು ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಪರಂಪರೆಯನ್ನು ಪತ್ರಿಕೆಗಳು ಮುಂದುವರೆಸಿಕೊಂಡು ಹೋಗದಿದ್ದರೆ ಪತ್ರಿಕೋದ್ಯಮದ ಸರ್ವನಾಶ ಖಂಡಿತ ಎಂದರು . ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ , ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ಪತ್ರಕರ್ತರಿಗೆ ಸರಕಾರದಿಂದ ಪರಿಹಾರ ಒದಗಿಸಲು ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಲು ಪ್ರಯತ್ನ ನಡೆದಿದೆ ಎಂದರು . ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು . ಕಾರ್ಯಕ್ರಮಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ , ಕವಿ ಡಾ . ಸಿದ್ದಲಿಂಗಯ್ಯ , ಜಿಲ್ಲಾ ಪತ್ರಕರ್ತರಾದ ವೆಂಕಟೇಶ್ , ಎಂ.ಎ. ರವಿ , ಎನ್.ಎಸ್.ಮೂರ್ತಿ ನಿಧನಕ್ಕೆ ಮೌನ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ , ಪತ್ರಕರ್ತರ ಸಹಕಾರ ಸಂಘದ ಉಪಾಧಕ ಕೆ.ಮಂಜುನಾಥ್ ಸೇರಿದಂತೆ ಜಿಲ್ಲೆಂರು ಹಲವಾರು ಪತ್ರಕರ್ತರು ಭಾಗವಹಿಸಿದ್ದರು.