ಪಾಂಬೂರು ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ರಜತ ಮಹೋತ್ಸವಕ್ಕೆ ಚಾಲನೆ

JANANUDI.COM NETWORK


ಉಡುಪಿ: ವಿಶೇಷ ಮಕ್ಕಳ ಸೇವೆ ದೇವರ ಸೇವೆಯಿದ್ದಂತೆ ಅವರ ಪ್ರತಿಭೆಗೆ ಸ್ಥಾನಮಾನ, ಗೌರವ ನೀಡುವುದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಅವರೂ ಕೂಡ ತೊಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೆಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ| ಜೆ. ಬಿ . ಸಲ್ಡಾನಾ ಹೇಳಿದರು. ಅವರು ಬುಧವಾರ ಪಾಂಬೂರು ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ರಜತ ಮಹೋತ್ಸವ ವರ್ಷದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.


ವಿಶೇಷ ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಅವರ ಸರ್ವತೋಮುಖ ಬೆಳವಣಿಗೆಯೊಂದಿಗೆ ಅವರ ಪ್ರತಿಭೆಗೆ ಗಮನ ನೀಡುವು ಕೆಲಸ ಕಳೆದ 24 ವರ್ಷಗಳಲ್ಲಿ ಮಾನಸ ಸಂಸ್ಥೆ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಕೆಲಸವಾಗಿದೆ. ಕ್ರೈಸ್ತ ಸಮುದಾಯ ಯೇಸು ಕ್ರಿಸ್ತರ ತೋರಿಸಿದ ಆದರ್ಶದಂತೆ ಬಡವರ ದೀನದಲಿತರ ಸೇವೆಗೆ ಸದಾ ಕಟಿಬದ್ದವಾಗಿದ್ದು, ಇಂತಹ ವಿಶೇಷ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸುವುದರೊಂದಿಗೆ ಅವರುಗಳು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಿಶೇಷ ಶ್ರಮ ವಹಿಸುತ್ತಿದ್ದು ಈ ಕೆಲಸ ಇನ್ನೂ ಪರಿಣಾಮಕಾರಿಯಾಗಿ ಮುಂದುವರಿಯುವಂತಾಗಲಿ ಎಂದು ಅವರು ಹೇಳಿದರು.


ರಜತ ಮಹೋತ್ಸವದ ಲೋಗೊ ಅನಾವರಣಗೊಳಿಸಿ ಮಾತನಾಡಿದ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಮಾತನಾಡಿ ಒಂದು ಸಂಸ್ಥೆಗೆ 25 ವರ್ಷಗಳು ಪೂರ್ಣಗೊಳ್ಳುವುದು ಒಂದು ಮೈಲಿಗಲ್ಲು. ದೇವರು ನಮಗೆ ನೀಡಿದ ಅವಕಾಶವನ್ನು ನೋವಿನಲ್ಲಿರುವವರಿಗೆ ಸ್ಪಂದಿಸಿದಾಗ ಆತ್ಮತೃಪ್ತಿ ಲಭಿಸುತ್ತದೆ. ಈ ನಿಟ್ಟಿನಲ್ಲಿ ಮಾನಸ ಸಂಸ್ಥೆ ತನ್ನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದೆ ಎಂದರು.


ಸಾಹಿತ್ಯ ಪುರಸ್ಕಾರ ಲಭಿಸಿದ ನಗದು ಪುರಸ್ಕಾರವನ್ನು ಮಾನಸ ಸಂಸ್ಥೆಗೆ ಸೋಲಾರ್‌ ದೀಪ ಅಳವಡಿಸಲು ದೇಣಿಗೆ ಯಾಗಿ ನೀಡಿದ್ದು ಮೂರು ದೀಪಗಳ ಉದ್ಘಾಟನೆಯನ್ನು ಸಾಹಿತಿ ವಿತಾಶಾ ರಿಯಾ ರೊಡ್ರಿಗಸ್‌ ನೆರವೇರಿಸಿದರು.


ಮಾನಸ ಸಂಸ್ಥೆಯ ಸಹಕಾರ್ಯದರ್ಶಿ ಡಾ| ಜೆರಾಲ್ಡ್‌ ಪಿಂಟೊ ಸಂಸ್ಥೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕರಾದ ಎಲ್‌ ರೋಯ್‌ ಕಿರಣ್‌ ಕ್ರಾಸ್ಟೊ ಮಾತನಾಡಿ ಮಾನಸ ಸಂಸ್ಥೆಯ ರಜತ ಮಹೋತ್ಸವ ವರ್ಷಕ್ಕೆ ಸಂಸ್ಥೆಯ ಹಾಗೂ ವಿಶೇಷ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅದರಲ್ಲಿ ಪ್ರಮುಖವಾಗಿ ಸಂಸ್ಥೆಯ ಆವರಣದಲ್ಲಿ ಸೋಲಾರ್‌ ದೀಪಗಳ ಅಳವಡಿಕೆ, ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯನಿಧಿ ರಚನೆ, ರಜತ ಮಹೋತ್ಸವದ ಸ್ಮರಣ ಸಂಚಿಕೆ, ಆಟಿಸಂ ಮೂಲಕ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ, ರಜತಮಹೋತ್ಸವದ ನೆನಪಿಗಾಗಿ ಆಟಿಸಂ ಸೇಂಟರ್‌, ವಿಶೇಷ ಮಕ್ಕಳ ಆರೈಕೆ ಧಾಮ ರಚನೆ, ವಿಶೇಷ ಮಕ್ಕಳಿಗಾಗಿ ಇರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಕಥೊಲಿಕ್‌ ಸಭಾ ಮಂಗಳೂರು ಅಧ್ಯಕ್ಷರಾದ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶದ ಅಧ್ಯಕ್ಷರಾದ ಮೇರಿ ಡಿಸೋಜಾ, ಮಾನಸ ಸಂಸ್ಥೆಯ ಕಾರ್ಯದರ್ಶಿ ಜೊಸೇಫ್‌ ನೊರೋನ್ಹಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಿಧಿ ಶೆಟ್ಟಿಗಾರ್‌, ಟ್ರಸ್ಟಿಗಳಾದ ವಲೇರಿಯನ್‌ ಫೆರ್ನಾಂಡಿಸ್‌, ಲೀನಾ ಮಚಾದೊ, ಕೆಥೊಲಿಕ್‌ ಸಭಾ ಪದಾಧಿಕಾರಿಗಳಾದ ಆಲ್ವಿನ್‌ ಕ್ವಾಡ್ರಸ್‌, ರೋಬರ್ಟ್‌ ಮಿನೇಜಸ್‌, ಗ್ರೆಗರಿ ಪಿಕೆ ಡಿಸೋಜಾ, ಜೆರಾಲ್ಡ್‌ ರೊಡ್ರಿಗಸ್‌, ಮೆಲ್ವಿನ್‌ ಆರಾನ್ಹಾ ಹಾಗೂ ಇತರರು ಉಪಸ್ಥಿತರಿದ್ದರು.
ಮಾನಸ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಹೆನ್ರಿ ಮಿನೇಜಸ್‌ ಸ್ವಾಗತಿಸಿ, ಪ್ರಾಂಶುಪಾಲೆ ಸಿ.ಅನ್ಸಿಲ್ಲಾ ಫೆರ್ನಾಂಡಿಸ್‌ ವಂದಿಸಿದರು.