ಶುಕ್ಲಯಜುಃಶಾಖಾಟ್ರಸ್ಟ್ ಸ್ವಘೋಷಿತ ಪದಾಧಿಕಾರಿಗಳಿಂದ ಭ್ರಷ್ಠಾಚಾರ
ಅವಿಭಜಿತ ಜಿಲ್ಲೆ ಯಾಜ್ಞವಲ್ಕ್ಯರ ಜಾಗೃತಿಗೆ ಅಭಿಯಾನ-ಸುಧಾಕರಬಾಬು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಬೆಂಗಳೂರಿನ ಶುಕ್ಲ ಯಜುಃಶಾಖಾ ಟ್ರಸ್ಟ್ ಆಧಾಯ ತೆರಿಗೆ ಇಲಾಖೆಯಿಂದ 1 ಕೋಟಿ ದಂಡ ಕಟ್ಟುವ ಪರಿಸ್ಥಿತಿಗೆ ಕಾರಣರಾದ ಆಡಳಿತ ಮಂಡಳಿಯ ಸ್ವಘೋಷಿತ ಪದಾಧಿಕಾರಿಗಳ ವಿರುದ್ದ ಸಮುದಾಯದ ಜಾಗೃತಿಗಾಗಿ ಶುಕ್ಲ ಯಜುರ್ವೇದ ಮಹಾಮಂಡಳ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಭಿಯಾನ ಆರಂಭಿಸಿದೆ ಎಂದು ಮಹಾಮಂಡಳದ ರಾಜ್ಯಾಧ್ಯಕ್ಷ ಸುಧಾಕರ ಬಾಬು ತಿಳಿಸಿದರು.
ನಗರದ ಕೋಟೆಯ ಶೃಂಗೇರಿ ಶಂಕರಮಠದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, 110 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶುಕ್ಲ ಯಜುಃಶಾಖಾ ಟ್ರಸ್ಟ್‍ಗೆ ಕಳೆದ 16 ವರ್ಷಗಳಿಂದ ಆಡಳಿತ ಮಂಡಳಿ ಪದಾಧಿಕಾರಿಗಳೆಂದು ಸ್ವಯಂ ಘೋಷಿಸಿಕೊಂಡಿರುವವರ ವ್ಯಕ್ತಿಗಳ ನಿರ್ಲಕ್ಷ್ಯದಿಂದಾಗಿ ಆದಾಯ ತೆರಿಗೆ ಇಲಾಖೆ 1 ಕೋಟಿ ದಂಡ ಹಾಕಿದ್ದು, ಇದು ಸಮುದಾಯಕ್ಕೆ ಆಗಿರುವ ಬಹುದೊಡ್ಡ ಅನ್ಯಾಯವಾಗಿದ್ದು, ಇದಕ್ಕೆ ಈ ವ್ಯಕ್ತಿಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್‍ನ ಆಡಳಿತ ಮಂಡಳಿ ಅಧಿಕಾರ ನಿಯಮಾನುಸಾರ 2019ರ ಜುಲೈ ತಿಂಗಳಿಗೆ ಕೊನೆಗೊಂಡಿದೆ, ಆದರೂ ನಾವೇ ಪದಾಧಿಕಾರಿಗಳೆಂದು ಹೇಳಿಕೊಂಡು ಸಮುದಾಯವನ್ನು ವಂಚಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಕೆಂಗೇರಿ ಬಳಿಯ ದೊಡ್ಡೇರಿ ಎಂಬಲ್ಲಿ ಟ್ರಸ್ಟ್ ಹೆಸರಿನಲ್ಲಿ 85 ಲಕ್ಷ ಜಮೀನು ಖರೀದಿಸಿದ್ದು, ಈವರೆಗೂ ಸಮರ್ಪಕ ದಾಖಲೆ ಪಡೆದಿಲ್ಲ, ಟ್ರಸ್ಟ್ ವಶಕ್ಕೂ ತೆಗೆದುಕೊಂಡಿಲ್ಲ ಎಂದರು.
ಆಡಳಿತ ಮಂಡಳಿ ಅಧಿಕಾರಾವಧಿ ಮುಗಿದ ನಂತರ ಸಮುದಾಯದ ಹಿರಿಯರು ರಚಿಸಿರುವ ಅಡ್ಯಾಕ್ ಸಮಿತಿಯನ್ನು ಪರಿಗಣಿಸದೇ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.
ಇತ್ತೀಚಿನ ಆಯವ್ಯಯದಲ್ಲಿ 2ಕೋಟಿ 21 ಲಕ್ಷ 91 ಸಾವಿರ ಆದಾಯ ಬಂದಿದೆ ಎಂದು ತೋರಿಸಲಾಗಿದೆ, ಇದರಲ್ಲಿ 1ಕೋಟಿ 71 ಲಕ್ಷ 91 ಸಾವಿರ ಮಾತ್ರ ಜಮಾ ಆಗಿದೆ. ಉಳಿದ ಹಣದಲ್ಲಿ ಯಾವುದೇ ಗುರುತಿಸುವಂತಹ ಕೆಲಸವನ್ನಂತೂ ಅವರು ಮಾಡಿಲ್ಲ. ಇದರಲ್ಲಿ 35 ಲಕ್ಷ ರೂಗಳ ಕೆಲಸ ನಡೆದಿರುವುದು ದಾಖಲೆಗಳಲ್ಲಿ ಗೋಚರವಾಗಿದೆ ಆದರೆ ಉಳಿದ ಹಣಕ್ಕೆ ದಾಖಲೆಯಿಲ್ಲ ಎಂದು ಆರೋಪಿಸಿದರು.
ಟ್ರಸ್ಟ್ ಆಡಳಿತದಲ್ಲಿ
ಅನ್ಯರ ಕೈವಾಡ
ಸಮುದಾಯಕ್ಕೆ ಸೇರದ ಕೆಲವು ಅನ್ಯ ವ್ಯಕ್ತಿಗಳು ಟ್ರಸ್ಟ್‍ನ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ, 1970 ರಲ್ಲಿ ಟ್ರಸ್ಟ್ ಆಶ್ರಯದಲ್ಲಿ ನಿರ್ಮಿಸಿರುವ ಕಟ್ಟಡಗಳು ಬಿಟ್ಟರೆ ಈವರೆಗೂ ಯಾವುದೇ ಅಭಿವೃದ್ದಿ ಕೆಲಸಗಳು ಮಾಡಿಲ್ಲ ಎಂದು ಕಿಡಿಕಾರಿದರು.
ಆಡಳಿತ ಮಂಡಳಿಯೆಂದು ಹೇಳಿಕೊಳ್ಳುವ ವ್ಯಕ್ತಿಗಳ ಅಜ್ಞಾನದಿಂದ ಟ್ರಸ್ಟ್ ಆಧಾಯ ತೆರಿಗೆ ಇಲಾಖೆಗೆ 1 ಕೋಟಿ ದಂಡ ಕಟ್ಟಬೇಕಾಗಿದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ವ್ಯಕ್ತಿಗಳಿಗೆ ಆಡಳಿತ ನಡೆಸುವ ನೈತಿಕತೆ ಇಲ್ಲದೇ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೋಲಾರ,ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಹೆಚ್ಚಿರುವ ಶುಕ್ಲ ಯಾಜ್ಞವಲ್ಕ್ಯ ಸಮುದಾಯ ಎಚ್ಚೆತ್ತುಕೊಂಡು ಟ್ರಸ್ಟ್ ಉಳಿಸುವ ಮಹಾಮಂಡಳದ ಈ ಅಭಿಯಾನ ಬೆಂಬಲಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶುಕ್ಲ ಯಜುರ್ವೇದ ಮಹಾಮಂಡಳ ಹಾಗೂ ಯಾಜ್ಞವಲ್ಕ್ಯ ಟ್ರಸ್ಟ್‍ನ ಪದಾಧಿಕಾರಿಗಳಾದ ರಮೇಶ್‍ದಿಡಿಗಾ, ಅಮರನಾಥ್, ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸತ್ಯನಾರಾಯಣರಾವ್, ಅನಂತರಾಘವ, ರಾಜೇಂದ್ರಪ್ರಸಾದ್,ದಿನೇಶ್,ಸತೀಶ್,ಚಿಂತಾಮಣಿಯ ಶ್ರೀನಾಥ್, ರವೀಂದ್ರನಾಥ್, ಶಂಕರ್ ಮತ್ತಿತರರಿದ್ದರು