ಉಡುಪಿಯ ಶ್ರೀ ಕೃಷ್ಣ ಪರ್ಯಾಯೋತ್ಸವವನ್ನು ವೈಭವಪೋಷಿತವಾಗಿ ನಡೆಸಲು ನಿರ್ಧರಿಸಲಾಗಿದ್ದು, ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ತಮ್ಮ ಪ್ರಿಯ ಶಿಷ್ಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳವರೊಂದಿಗೆ ಜ.18 ರಂದು ಸರ್ವಜ್ಞ ಪೀಠವನ್ನೇರಿ ಶ್ರೀ ಕೃಷ್ಣ ಪೂಜಾ ದೀಕ್ಷೆ ಕೈಗೊಳ್ಳಲಿದ್ದಾರೆ.
ಉಡುಪಿ ಪರ್ಯಾಯೋತ್ಸವಕ್ಕೆ ಪ್ರತಿ ಬಾರಿಯಂತೆ ಈ ಬಾರಿಯೂ ಹೊರೆ ಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನಾ ಸಭೆ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ಪರ್ಯಾಯ ಮಹೋತ್ಸವ ಸಮಿತಿ ಪರವಾಗಿ ಮಠದ ದಿವಾನರಾದ ನಾಗರಾಜ ಆಚಾರ್ಯ, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ರವೀಂದ್ರ ಆಚಾರ್ಯ, ಜತೆ ಕಾರ್ಯದರ್ಶಿ ರಘುಪತಿ ರಾವ್ ಉಪಸ್ಥಿತರಿದ್ದು, ಪರ್ಯಾಯ ಮಹೋತ್ಸವಕ್ಕೆ ಆಹ್ವಾನ ನೀಡಿದರು.
ಹೊರೆ ಕಾಣಿಕೆ ಸಂಚಾಲಕರಾದ ಬೈಕಾಡಿ ಸುಪ್ರಸಾದ ಶೆಟ್ಟಿ ಮಾತನಾಡಿ, ಶ್ರೀ ಪುತ್ತಿಗೆ ಮಠಾಧೀಶರ ಪರ್ಯಾಯೋತ್ಸವದಲ್ಲಿ ಹೊರೆ ಕಾಣಿಕೆ ಅರ್ಪಣೆ ಶ್ರೀ ಕೃಷ್ಣನಿಗೆ ಅರ್ಪಿಸುವ ವಿಶೇಷ ಸೇವೆಯಾಗಿದ್ದು, ಕುಂದಾಪುರ, ಬೈಂದೂರು ತಾಲೂಕಿನಿಂದ ಜನವರಿ 12 ರಂದು ಹೊರೆ ಕಾಣಿಕೆ ಸಮರ್ಪಿಸಲು ನಿರ್ಧರಿಸಲಾಗಿದೆ. ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ವಾಹನಗಳಲ್ಲಿ ಹೊರೆ ಕಾಣಿಕೆ ಸಮರ್ಪಿಸುವ ಉದ್ದೇಶ ಹೊಂದಿದ್ದು, ಎಲ್ಲ ಗ್ರಾಮಗಳಿಂದ ಧಾರ್ಮಿಕ ಕೇಂದ್ರಗಳಿಂದ ಹೊರೆ ಕಾಣಿಕೆ ಸಮರ್ಪಣೆಯಾಗುವಂತೆ ಊರ ಗಣ್ಯರು, ಧಾರ್ಮಿಕ ಕ್ಷೇತ್ರಗಳ ಮುಖ್ಯಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.
ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಯು.ಎಸ್.ಶೆಣೈ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಪೂಜಾರಿ, ಸುರೇಶ ಶೆಟ್ಟಿ, ರಾಗಿಣಿ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದು, ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕುಂದಾಪುರ ಪುರಸಭಾ ವಲಯ ಸಹಿತ ವಿವಿಧ ಕೇಂದ್ರಗಳಲ್ಲಿ ಸಭೆ ನಡೆಸಿ, ಹೊರೆ ಕಾಣಿಕೆ ಸಂಗ್ರಹ ಮಾಹಿತಿ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಯಿತು.
ಶ್ರೀ ವಿನಾಯಕ ದೇವಸ್ಥಾನದ ನಿಕಟಪೂರ್ವ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, “ವಿಶ್ವಾದ್ಯಂತ ಭಾರತೀಯ ಧಾರ್ಮಿಕ ಆಚರಣೆಯ ಮಹತ್ವವನ್ನು ಸಾರುತ್ತಾ, ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ದೇವಾಲಯ ನಿರ್ಮಾಣಕ್ಕೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಪುತ್ತಿಗೆ ಮಠಾಧೀಶರು ದೇಶಕ್ಕಾಗಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಶ್ರೀ ಪಾದಂಗಳವರ ಪರ್ಯಾಯೋತ್ಸವ ಅವರ ಭಗವದ್ಗೀತಾ ಅಭಿಯಾನಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ. ಕುಂದಾಪುರ ತಾಲೂಕಿನ ಭಕ್ತಾಭಿಮಾನಿಗಳು ಪರ್ಯಾಯೋತ್ಸವ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕು” ಎಂದರು.
ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪರ್ಯಾಯ ಅರ್ಚಕರು ಭಾಗವಹಿಸಿದ್ದರು.
ದೇವಾಲಯದ ವ್ಯವಸ್ಥಾಪಕ ನಟೇಶ ಕಾರಂತ ವಂದಿಸಿದರು.