ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ,ಏ.7: ಶಾಲೆಯ ರಜೆಯಲ್ಲಿ ಮಕ್ಕಳು ಕಾಲಹರಣ ಮಾಡದೆ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಮೂಲಕ ವೈವಿಧ್ಯಮಯ ಕಲಾಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾರವರು ತಿಳಿಸಿದರು.
ನಗರದ ಪಿ.ಸಿ ಬಡಾವಣೆಯ ರತ್ನಮಾಲಾ ಮಹಿಳಾ ಮಂಡಳಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಆಟವಾಡಲು ಹೊಸ ಕಲೆಯನ್ನು ಕಲಿಯಲು ಬಹಳಷ್ಟು ಅವಕಾಶಗಳಿವೆ, ಆದರೆ ನಗರ ಪ್ರದೇಶದಲ್ಲಿನ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ ಎಂದ ಅವರು, ಪೋಷಕರು ಮಕ್ಕಳನ್ನು ಹೊರಗಡೆ ಬಿಡುವುದಕ್ಕೆ ಮುಂದಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಒಂದೆಡೆ ಕಲೆತು-ನಲಿದು ಹೊಸ ಆಟೋಟ- ಪಾಟೋಟ ಕಲಿಯಲು ಸಹಾಯವಾಗುತ್ತದೆ ಎಂದು ವಿವರಿಸಿದರು.
ಮತ್ತೋರ್ವ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್ ಮಾತನಾಡಿ, ಮಕ್ಕಳಿಗೆ ಅವರ ಆಸಕ್ತಿದಾಯಕ ವಿಷಯ, ಕಲೆ, ಆಟೋಟಗಳಿಗೆ ಪೋಷಕರು ಮುಕ್ತ ಅವಕಾಶ ಮಾಡಿಕೊಟ್ಟಾಗ, ಅವರ ಮನೋಬಲದ ಸಾಮಥ್ರ್ಯ ಹಾಗೂ ಕೌಶಲ್ಯಾಭಿವೃದ್ಧಿಗೆ ಅವಕಾಶವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರತ್ನಮಾಲಾ ಮಹಿಳಾ ಮಂಡಳಿಯ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತರಾದ ಎಸ್.ವಿ ರತ್ನಮಾಲಾ ರಾಮಚಂದ್ರ ಅವರು ಮಾತನಾಡಿ, ಮಕ್ಕಳು ಹೆಚ್ಚಾಗಿ ಮೊಬೈಲ್ ಹಾಗೂ ಟಿ.ವಿ ಕಡೆಗೆ ಆಸಕ್ತಿ ವಹಿಸುತ್ತಿರುವುದು ಅವರ ಆರೋಗ್ಯ ಹಾಗೂ ಮಾನಸಿಕ ಸಾಮಥ್ರ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದರು.
ಈ ಬೇಸಿಗೆ ರಜೆಯಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಗೀಳು ಬೆಳೆಸಿಕೊಳ್ಳುವುದನ್ನು ತಪ್ಪಿಸಲು ಹಾಗೂ ಮಕ್ಕಳ ಆಸಕ್ತಿ ಹಾಗೂ ಆಕರ್ಷಣೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯತ್ತ ಕೇಂದ್ರೀಕರಿಸಲು ಹೆಚ್ಚಿನ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಸಂಪನ್ಮೂಲ ವ್ಯಕ್ತಿ ಮಂಜುಳ ಭೀಮರಾವ್ ಹಾಗೂ ಕಲಾ ಶಿಕ್ಷಕಿ ಕೃಪಾ ಮಧುಕರ ಅವರು ವಿವಿಧ ಚಿತ್ರಕಲೆಗಳನ್ನು ಪ್ರದರ್ಶಿಸಿ ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು.
ಮನಸ್ವಿ ಪ್ರಾರ್ಥಿಸಿ, ರತ್ನಮಾಲ ಸ್ವಾಗತಿಸಿ, ದಕ್ಷಿತ ನಿರೂಪಿಸಿ, ರಾಗಿಣಿ ವಂದಿಸಿದರು.