ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಪ್ರತ್ಯೇಕ ತಾಲ್ಲೂಕು ಆಗಿರುವ ಕೆಜಿಎಫ್‍ಗೆ ಕೂಡಲೇ ಎಪಿಎಂಸಿ, ಟಿಎಪಿಸಿಎಂಎಸ್ ಹಾಗೂ ಪಿಸಿಆರ್‍ಡಿ ಬ್ಯಾಂಕ್‍ಅನ್ನು ಪ್ರತ್ಯೇಕಗೊಳಿಸಿ ಮಂಜೂರು ಮಾಡುವಂತೆ ಶಾಸಕಿ ರೂಪಕಲಾ ಶಶಿಧರ್ ಮಾಡಿದ ಮನವಿಗೆ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಸ್ವಷ್ಟ ಭರವಸೆ ಸಿಕ್ಕಿದೆ.
ಮಂಗಳವಾರ ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ಕೆಜಿಎಫ್‍ಅನ್ನು ಹೊಸ ತಾಲ್ಲೂಕಾಗಿ ಘೋಷಿಸಿ 4 ವರ್ಷ ಉರುಳಿದೆ, ಇನ್ನೂ ತಾಲ್ಲೂಕಿನಲ್ಲಿ ಇರಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ,ತಾಲ್ಲೂಕು ಸೊಸೈಟಿ, ಪಿಸಿಆರ್‍ಡಿ ಬ್ಯಾಂಕ್ ಪ್ರತ್ಯೇಕಗೊಳಿಸಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
50 ಎಕರೆ ಜಾಗಕ್ಕೆ ಸಚಿವರಿಗೆ ಮನವಿ
ಗಡಿ ತಾಲ್ಲೂಕಾಗಿದ್ದು, ಇಲ್ಲಿ ಹೆಚ್ಚಿನ ತರಕಾರಿ ಬೆಳೆಯಲಾಗುತ್ತಿದೆ, ಇಲ್ಲೊಂದು ದೊಡ್ಡ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸುವ ಮೂಲಕ ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಕೋಲಾರಕ್ಕೆ ಸಾಗಿಸುವ ಸಾಗಾಣಿಕಾ ವೆಚ್ಚ ತಗ್ಗಿಸುವ ಅಗತ್ಯವೂ ಇದೆ ಎಂದು ಮನವರಿಕೆ ಮಾಡಿಕೊಟ್ಟರು.
ಎಪಿಎಂಸಿ ಮಾರುಕಟ್ಟೆಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲು ಅಗತ್ಯವಾಗುವಂತೆ 50 ಎಕರೆ ಜಮೀನು ಗುರುತಿಸಿ ಮಂಜೂರು ಮಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕೋಲಾರ ಎಪಿಎಂಸಿವಿಸ್ತರಣೆಗೆ ಮನವಿ
ಇದೇ ಸಂದರ್ಭದಲ್ಲಿ ಕೋಲಾರ ಎಪಿಎಂಸಿ ಕುರಿತು ಗಮನ ಸೆಳೆದ ರೂಪಕಲಾ ಶಶಿಧರ್, ಕೋಲಾರ ಟಮೋಟೋ ಮಾರುಕಟ್ಟೆ ಏಷ್ಯಾದಲ್ಲೇ ದೊಡ್ಡದೆಂಬ ಖ್ಯಾತಿ ಇದೆ, ಆದರೆ ಟಮೋಟೋ ಸೀಸನ್ ಬಂದರೆ ಜಾಗವಿಲ್ಲದೇ ಎಲ್ಲೆಂದರಲ್ಲಿ ಟಮೋಟೋ ರಾಶಿಗಳು, ವಾಹನಗಳ ಒತ್ತಡದಿಂದಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ಟಮೋಟೋ ಸೀಸನ್ ಆಗಿರುವ ಈಗ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ, ಒಂದೆರಡು ದಿನಗಳಿಂದ ಬೆಲೆ ಸ್ವಲ್ಪಮಟ್ಟಿಗೆ ಸುಧಾರಣೆಯತ್ತ ಸಾಗಿದೆ, ಆದರೆ ಮಾರುಕಟ್ಟೆಯಲ್ಲಿ ಜಾಗವಿಲ್ಲದೇ ರೈತರು,ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದರು.
ಈ ಮಾರುಕಟ್ಟೆಗೆ ತಾವೇ ಖುದ್ದು ಭೇಟಿ ಕೊಟ್ಟು ಮಾರುಕಟ್ಟೆ ವಿಸ್ತರಣೆಗೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಿ, ನಂತರ 100 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕೆಜಿಎಫ್‍ಗೆ ಎಪಿಎಂಸಿ
ಸಚಿವರ ಭರವಸೆ
ಮನವಿಗೆ ಸ್ಪಂದಿಸಿದ ಸಚಿವ ಸೋಮಶೇಖರ್, ಕೃಷಿಉತ್ಪನ್ನ ಮಾರಾಟ ಇಲಾಖೆ ಪ್ರಧಾನ ಕಾರ್ಯದರ್ಶಿ ಕರೀಗೌಡರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಕೆಜಿಎಫ್‍ನಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಪಿಸಿಆರ್‍ಡಿ ಬ್ಯಾಂಕ್ ಹಾಗೂ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸ್ಥಾಪನೆ ಕುರಿತು ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.