ಕುಂದಾಪುರ ತಾರೀಕು 28/07/2024 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಕುಟುಂಬ ಆಯೋಗದ ಸಹಕಾರದಲ್ಲಿ ಹಿರಿಯರ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 10.15 ಕ್ಕೆ ಸರಿಯಾಗಿ ಸಂಭ್ರಮದ ದಿವ್ಯ ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ಹಾಜರಿದ್ದ ವಂದನೀಯ ಗುರು ಫ್ರಾನ್ಸಿಸ್ ಕಾರ್ನೆಲಿಯೋ ನೆರವೇರಿಸಿದರು. ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ಹಿಲ್ಡ ಡಿಸಿಲ್ವ ಹಾಜರಿದ್ದು, ವೃದ್ಧಾಪ್ಯಾದಲ್ಲಿ ಹಿರಿಯರು, ಮಕ್ಕಳು ಮೊಮ್ಮಕ್ಕಳ ಜೊತೆ ಹೇಗೆ ಸುಖಕರ ಜೀವನ ನಡೆಸಬಹುದು ಎಂದು ತಿಳಿಸಿದರು. ಸಮಾರಂಭದಲ್ಲಿ, ಈಗತಾನೆ 60 ವರ್ಷ,75 ವರ್ಷ ಪೂರೈಸಿದ ಹಿರಿಯರನ್ನು ಹಾಗೂ ಮದುವೆಯಾಗಿ 50 ವರ್ಷ ಪೂರೈಸಿದ ಹಿರಿಯ ದಂಪತಿಗಳಿಗೆ ಈಗರ್ಜಿಯ ಧರ್ಮ ಗುರುಗಳಾದ ವಂದನೀಯ ಎಡ್ವಿನ್ ಡಿಸೋಜಾರವರು ಶಾಲು ಹೊದೆಸಿ ಸನ್ಮಾನಿಸಿದರು.
ಹಿರಿಯರಿಗಾಗಿ ಲಕ್ಕಿ ಗೇಮ್ ನಡೆಸಿ ಗೆದ್ದವರಿಗೆ ಬಹುಮಾನವನ್ನು ವಿತರಿಸಿ ಗೌರವಿಸಿದರು . ICYM ಸದಸ್ಯರು ಮನರಂಜನಾ ಕಾರ್ಯಕ್ರಮವನ್ನು ನೀಡಿದರು.YCS ವಿದ್ಯಾರ್ಥಿಗಳು ಹಿರಿಯರನ್ನು ಉಪಚರಿಸಿದರು.ಸುಮಾರು 106 ಮಂದಿ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ 20 ಆಯೋಗದ ಸಂಚಾಲಕರು ಹಾಜರಿದ್ದರು.
ಕಾರ್ಯಕ್ರಮವು ಕುಟುಂಬ ಆಯೋಗದ ಸಂಚಾಲಕರಾದ ಶ್ರೀ ರಾಜೇಶ್ ಮೆಂಡೋನ್ಸಾರವರ ನೇತೃತ್ವದಲ್ಲಿ ನಡೆಯಿತು . ಆಯೋಗದ ಸದಸ್ಯರಾದ ಶ್ರೀ ಅನಿಲ್ ಡಿಸಿಲ್ವರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.