ಶ್ರೀನಿವಾಸಪುರ 1 : ಕವಿತೆಗಳು ಭಾವ ತುಂಬಿ ಬರಬೇಕು. ಪದ್ಯದ ಶೈಲಿಯನ್ನು ಬಿಟ್ಟುಕೊಡಬಾರದು. ಭಾಷೆ ಸರಳವಾಗಿದ್ದು,
ಓದುಗರಿಗೆ ಹತ್ತಿರವಾಗಿದ್ದರೆ ಚೆನ್ನ. ಪ್ರಸ್ತುತ ಸನ್ನಿವೇಶಗಳಿಗೆ ಸ್ಪಂದಿಸುವಂತಿರಬೇಕು ಎಂದು ಹಿರಿಯ ಕವಿ ಪಣಸಮಾಕನಹಳ್ಳಿ ಆರ್. ಚೌಡರೆಡ್ಡಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸಪುರ ಘಟಕದಿಂದ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಂಜೆ “ಯುಗಾದಿ ಕವಿಗೋಷ್ಠಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆ ಮಾಡಿ ಮಾತನಾಡಿದರು.
ಇಂಗ್ಲೀಷಿನ ನ್ಯೂಮನ್ ಕವಿ ತನ್ನ “ಲೀಡ್ ಕೈಂಡ್ಲಿ, ಲೈಟ್” ಎಂಬ ಒಂದೇ ಕವಿತೆಯಿಂದ ಜಗತ್ಪ್ರಸಿದ್ಧರಾದರು. ಸಂಖ್ಯೆ ಮುಖ್ಯವಲ್ಲ, ಬರೆದದ್ದು ಕಡಿಮೆ ಕವಿತೆಗಳಾದರೂ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಕವಿಗಳಿಗೆ ಕಿವಿಮಾತು ಹೇಳಿದರು.
ಶ್ರೀನಿವಾಸಪುರದ ಕಸಾಪ ಅಧ್ಯಕ್ಷರಾದ ಶ್ರೀಮತಿ ಪಿ.ಎಸ್.ಮಂಜುಳ ಮಾತನಾಡಿ, ಈ ಹಿಂದೆ ನಮ್ಮ ತಾಲೂಕಿನಲ್ಲಿ ಕವಿಗೋಷ್ಠಿ ಎಂದರೆ ಐದಾರು ಮಂದಿಯೂ ಸಿಗುತ್ತಿರಲಿಲ್ಲ. ಕವಿತೆ ರಚನೆ ಮಾಡುವವರಿದ್ದರೂ ಅವರು ಬೆಳಕಿಗೆ ಬರುತ್ತಿರಲಿಲ್ಲ.
ಇಂದು ಇಪ್ಪತ್ತಕ್ಕೂ ಹೆಚ್ಚು ಕವಿಗಳು ಕವಿತಾ ರಚನೆಯಲ್ಲಿ ತೊಡಗಿರುವುದು ಸಂತಸದ ವಿಷಯ. ಇವರನ್ನು ಪ್ರೋತ್ಸಾಹಿಸುವುದು ಸಾಹಿತ್ಯ ಪರಿಷತ್ತಿನ ಕೆಲಸ. ಹೀಗಾಗಿ “ಯುಗಾದಿ ಕವಿಗೋಷ್ಠಿ” ಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷರಾದ ಎನ್. ಬಿ. ಗೋಪಾಲಗೌಡ ತಮ್ಮ ಆಶಯ ನುಡಿಯಲ್ಲಿ, ಕವಿತೆ ಹುಟ್ಟಲು ಯಾವುದಾದರೊಂದು ಘಟನೆ, ನಿಸರ್ಗ ಸಂಗತಿಗಳು
ಸ್ಫೂರ್ತಿಗೆ ಕಾರಣವಾಗುವುದು. ‘ಬಾರಿಸು ಕನ್ನಡ ಡಿಂಡಿಮ’ ಕವಿತೆ ಬರೆಯಲು ಕುವೆಂಪು ಅವರಿಗೆ ಕರ್ನಾಟಕ ಏಕೀಕರಣ ಸಂದರ್ಭ ಕಾರಣವಾದರೆ, ಅವರ ಇನ್ನೊಂದು ಕವಿತೆ ‘ಅಖಂಡ ಕರ್ನಾಟಕ’ ಹುಟ್ಟಿದ್ದು, ಕರ್ನಾಟಕ ಎಂಬ ಹೆಸರಿನ ನಾಮಕರಣಕ್ಕೆ ವಿರೋಧಿಸವವರ ವಿರುದ್ಧದ ಸಮಯವಾಗಿತ್ತು. ಹೀಗಾಗಿ, ಇವತ್ತು ವಾಚನ ಮಾಡಿದ ಕವಿಗಳಿಗೆ ಯುಗಾದಿ ಹಬ್ಬ ಹಿನ್ನೆಲೆ, ಪ್ರಕೃತಿಯಲ್ಲಿನ ಬದಲಾವಣೆಗಳು ಇಂಬು ಕೊಟ್ಟಿವೆ ಎಂದು ಶ್ಲಾಘಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಹಿರಿಯ ಕವಿಗಳಾದ ಚಾಂಪಲ್ಲಿ ಚಂದ್ರಶೇಖರ್, ತಮ್ಮದೊಂದು ಕವಿತೆಯನ್ನು ವಾಚಿಸಿ, ಭಾಗವಹಿಸದ ಕವಿಗಳ ಕವಿತೆಗಳನ್ನು ಶ್ಲಾಘಿಸಿದರು.
ಕಾರ್ಯದರ್ಶಿಗಳಾದ ಬೈರೇಗೌಡ, ರವಿಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕವಿಗಳಾದ ಶಂಕರಪ್ಪ, ವಿ. ರಾಧಾಕೃಷ್ಣ, ಪ್ರಸನ್ನಕುಮಾರ್, ಎನ್. ಶಂಕರೇಗೌಡ, ಶಿವರಾಮೇಗೌಡ, ಅರುಣ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಮೃತ್ಯುಂಜಯ, ಲಕ್ಮೀಗೌಡ, ಮಮತಾರಾಣಿ ಯುಗಾದಿ ಕವಿಗೋಷ್ಠಿಯಲ್ಲಿ ತಮ್ಮ ಕವಿತೆ ವಾಚನ ಮಾಡಿದರು. ಉಪನ್ಯಾಸಕರಾದ ಜಿ.ಕೆ.ನಾರಾಯಣಸ್ವಾಮಿ ಶಿಕ್ಷಕರಾದ ಟಿ.ವಿ.ನಟರಾಜ್, ಆರತಿ, ಕೃಷ್ಣಪ್ಪ ಇದ್ದರು.