ಕೋಲಾರ:- ಪ್ರಧಾನಿ ನರೇಂದ್ರಮೋದಿಯವರ ಕನಸಿನ ಪೋಷಣ್ ಅಭಿಯಾನ ಯಶಸ್ವಿಗೊಳಿಸುವ ಮೂಲಕ ಅಪೌಷ್ಠಿಕತೆ ಮತ್ತು ರಕ್ತಹೀನತೆ ಮುಕ್ತ ಭಾರತ ನಿರ್ಮಾಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಕೈಜೋಡಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆಯ ಸಮಾರೋಪ ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನಡೆಸಿ, ಸ್ವತಃ ತಲಾ 2 ಸಾವಿರರೂಗಳೊಂದಿಗೆ ಭಾಗಿನ ನೀಡಿ ಅವರು ಮಾತನಾಡುತ್ತಿದ್ದರು.
ಗರ್ಭಿಣಿಯರು,ಮಕ್ಕಳ ಆರೋಗ್ಯ ರಕ್ಷಣೆ, ಅಪೌಕಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಅಂಗ ನವವಾಡಿ ಕಾರ್ಯಕರ್ತೆಯರ ಜವಾಬ್ದಾರಿ ದೊಡ್ಡದಿದ್ದು, ಭವಿಷ್ಯದಲ್ಲಿ ದೇಶಕ್ಕೆ ಆರೋಗ್ಯವಂತ ಮಕ್ಕಳನ್ನು ನೀಡುವ ಹೊಣೆಗಾರಿಕೆ ನಿಮ್ಮದಾಗಿದೆ ಎಂದರು.
ಅಂಗನವಾಡಿಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳೆಂದು ತಿಳಿದು ಪೋಷಿಸಿ ಎಂದು ಕಿವಿಮಾತು ಹೇಳಿದ ಅವರು, ಮಕ್ಕಳು,ಗರ್ಭಿಣಿಯರ ಭವಿಷ್ಯ ಅಡಗಿರುವ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಭ್ರಷ್ಠಾಚಾರಕ್ಕೆ ಅವಕಾಶ ನೀಡಬಾರದು, ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಪೋಷಣ್ ಅಭಿಯಾನ ಹಾಗೂ ಮಾತೃವಂದನಾ ಕಾರ್ಯಕ್ರಮದ ಕುರಿತು ತಾಯಂದಿರಿಗೆ ಅರಿವು ಮೂಡಿಸಿ ಎಂದರು.
ಮಹಾಭಾರತದಲ್ಲಿ ಅಭಿಮನ್ಯು ಸುಭದ್ರೆಯ ಗರ್ಭದಲ್ಲಿದ್ದಾಗ ಶ್ರೀಕೃಷ್ಣ ಚಕ್ರವ್ಯೂಹ ಬೇಧಿಸುವ ಕಥೆಯನ್ನು ಹೇಳಿ ವಾಪಸ್ಸು ಬಾರದ್ದನ್ನು ತಿಳಿಸಲಿಲ್ಲ ಎಂಬ ಮಾತಿದೆ, ಆದ್ದರಿಂದ ಗರ್ಭಿಣಿಯರಿಗೆ ನಮ್ಮ ಸಂಸ್ಕøತಿ,ದೇಶಪ್ರೇಮ,ನಾಡು,ನುಡಿಯ ಧೀಮಂತ ಪುರುಷರ ಕಥೆಗಳನ್ನು ಪೂರ್ಣವಾಗಿ ಹೇಳಿ, ಆರೋಗ್ಯದ ಜತೆಗೆ ದೇಶದ ಘನತೆ ಎತ್ತಿಹಿಡಿಯುವ ಸಂಸ್ಕಾರವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಅಂಗನವಾಡಿ ಕಾರ್ಯಕರ್ತರು ಸಹಕರಿಸಿ ಎಂದು ಕಿವಿಮಾತು ಹೇಳಿದರು.
ಸ್ತ್ರೀಸಂಘಗಳಲ್ಲಿನ ಉತ್ಪನ್ನಕ್ಕೆ ಮಾರುಕಟ್ಟೆ
ಜಿಲ್ಲೆಯಲ್ಲಿ 44948 ಗರ್ಭಿಣಿಯರಿದ್ದಾರೆ, ಅವರೆಲ್ಲರ ಹೆಸರಿನಲ್ಲಿ ತಲಾ ಒಂದೊಂದು ಗಿಡ ನೆಟ್ಟರೂ ಪರಿಸರಕ್ಕೆ ಅಪಾರ ಕೊಡುಗೆ ನೀಡಿದಂತಾಗುತ್ತದೆ, ತಮ್ಮ ಮಗುವಿನಂತೆಯೇ ಆ ಗಿಡವನ್ನು ಕುಟುಂಬ ಪೋಷಿಸಿಕೊಂಡು ಹೋಗಬೇಕೆಂಬ ಅರಿವು ಮೂಡಿಸಿ, ಪ್ಲಾಸ್ಟಿಕ್ ಮುಕ್ತ ಕೋಲಾರ ಮಾಡಿ ಎಂದರು.
ಅಂಗನವಾಡಿಗಳಿಗೆ ಅಗತ್ಯವಾದ ಆಹಾರೋತ್ಪನ್ನಗಳನ್ನು ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳಿಂದ ಖರೀದಿಸುವ ಮೂಲಕ ಮಹಿಳೆಯರು ತಮ್ಮ ಸ್ವಾವಲಂಬನೆಗಾಗಿ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಂತಾಗಲಿದ್ದು, ಈ ಕುರಿತು ಸರ್ಕಾರದ ಹಂತದಲ್ಲಿ ಗಮನಹರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿದ್ದು, ಸಂಸದ ಮುನಿಸ್ವಾಮಿ ಪ್ರತಿಯೊಬ್ಬರಿಗೂ ತಾಂಬೂಲದಲ್ಲಿ ತಲಾ 2 ಸಾವಿರ ರೂ ನೀಡಿ ಶುಭ ಕೋರಿದರು.
ಪೋಷಣ್ ಅಭಿಯಾನದ ಸಮಾರೋಪದ ಅಂಗವಾಗಿ ನಡೆಸಲಾದ ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ, ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜು, ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ, ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಜಮೀನುಲ್ಲಾಖಾನ್ ಮತ್ತಿತರರು ಉಪಸ್ಥಿತರಿದ್ದರು.