ಸ್ವಾತಂತ್ರ್ಯ ವೀರರ ನಾಟಕ ನೋಡಿ ತನ್ನ ಕಾಯಕಕ್ಕೆ ಸಿಕ್ಕ – ಪದಕವನ್ನೇ ರಂಗವಿಜಯ ತಂಡಕ್ಕೆ ಅರ್ಪಿಸಿದ ಯೋಧ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ದೆಹಲಿಯಲ್ಲಿ ಜಿಲ್ಲೆಯ ರಂಗವಿಜಯ ತಂಡ ಪ್ರದರ್ಶಿಸಿದ ನಾಡಿನ ಸ್ವತಂತ್ರ್ಯ ವೀರರ ಕುರಿತಾದ ನಾಟಕ ನೋಡಿದ ದೇಶ ಕಾಯುವ ಸೈನಿಕ ಬಾಗಲಕೋಟೆಯ ಸಮೀಪದ ಹಳ್ಳಿಯ ಬಸವರಾಜ್ ದುಡ್ನಿ ತನ್ನ ಸೇವಾ ಜೇಷ್ಠತೆಗೆ ಸಿಕ್ಕ ಪದಕವನ್ನೇ ಕಲಾವಿದರಿಗೆ ಬಳುವಳಿಯಾಗಿ ನೀಡಿದ ಘಟನೆ ನಡೆದಿದೆ.
ಯೋಧ ಬಸವರಾಜ್ ದುಡ್ನಿ ನಾಟಕ ವೀಕ್ಷಿಸಿದ ನಂತರ ಕೋಲಾರದ ಕಲಾವಿದರನ್ನು ಮಾತನಾಡಿಸುವ ಪ್ರಯತ್ನ ಮಾಡಿ ಸಾಧ್ಯವಾಗದಿದ್ದಾಗ ಹಾಗೆ ಹೊರಟು ಹೋಗಿದ್ದರು.
ವಿಶೇಷವೆಂದರೆ ಕಲಾವಿದರ ತಂಡ ವಾಪಸ್ಸಾಗಲು ದೆಹಲಿಯಿಂದ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಹತ್ತಿದಾಗ ಅದೇ ರೈಲಿಗೆ ಬಂದ ಬಸವರಾಜ್ ಕಲಾವಿದರ ತಂಡ ನೋಡಿ ಪುಳಕಿತರಾದರು. ಕೂಡಲೇ ಕಲಾವಿದರೊಂದಿಗೆ ಬೆರೆತು ತಂಡದ ಜೊತೆಗೆ ಫೆÇೀಟೋ ತೆಗೆಸಿಕೊಂಡು ನಾನೊಂದು ಸಣ್ಣ ಕಾಣಿಕೆಯನ್ನು ನೀಡಲು ಬಯಸುತ್ತೇನೆ ಎಂದಿದ್ದಾರೆ.
ಕೂಡಲೇ ತಮ್ಮ ಸೇವಾ ಜೇಷ್ಠತೆಗೆ ನೀಡಿರುವ ಪದಕವನ್ನು ತೆಗೆದು ಇದು ರಂಗ ವಿಜಯಕ್ಕೆ ಅರ್ಪಿಸುತ್ತಿದ್ದೇನೆ ಎಂದು ನೀಡಿದಾಗ ಕಲಾವಿದರು ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ. ಅದು ನಿಮಗೆ ಸರ್ಕಾರ ನೀಡಿರುವ ಬಹುದೊಡ್ಡ ಕೊಡುಗೆ ಇದನ್ನು ನಮಗೆ ನೀಡುವುದು ಬೇಡ ಫೆÇೀಟೋ ತೆಗೆಸಿಕೊಂಡು ವಾಪಸ್ ತೆಗೆದುಕೊಳ್ಳಿ ಎಂದೆಲ್ಲ ಬೇಡಿಕೊಂಡರೂ ಸೈನಿಕ ಒಪ್ಪಲಿಲ್ಲ.
ನಿಮ್ಮ ನಾಟಕ ನಮ್ಮಂತಹ ಸಾವಿರಾರು ಜನರನ್ನು ಪ್ರೇರೇಪಿಸುತ್ತದೆ ಭಾರತದ ಸ್ವಾತಂತ್ರ್ಯಕ್ಕೆ ಮಿಡಿದ ಅದೆಷ್ಟು ವೀರ ಹೋರಾಟಗಾರರನ್ನು ನೆನಪಿಸುತ್ತದೆ ನಿಜಕ್ಕೂ ನನಗೆ ಕಣ್ಣೀರು ಬಂತು ಅಂತಹ ಅದ್ಭುತ ನಾಟಕ ಮಾಡಿರುವ ನಿಮ್ಮ ತಂಡಕ್ಕೆ ನನ್ನದೊಂದು ಚಿಕ್ಕ ಕಾಣಿಕೆಯೆಂದರು.
ಆದರೆ ಅದರ ಬೆಲೆ ಏನು ಎಂಬುದು ನಮಗೆ ಗೊತ್ತು ರಂಗ ವಿಜಯ ಇಷ್ಟು ಎತ್ತರಕ್ಕೇರಿದೆ ಎಂದು ಆನಂದವಾಯಿತು ಆನಂದಬಾಷ್ಪ ಬಂತು ಒಟ್ಟಾರೆ ಇಡೀ ದಿನ ಸೈನಿಕ ನಮ್ಮ ಜೊತೆಗೆ ಇದ್ದರು ಮಾತನಾಡಿದರು. ತಮ್ಮ ಅನುಭವ ಹಂಚಿಕೊಂಡರು ಎಂದು ತಂಡದ ವಿಜಿ ತಿಳಿಸಿದ್ದಾರೆ.
ಒಟ್ಟಾರೆ ಒಬ್ಬ ಸೈನಿಕನ ಮನಗೆದ್ದ ನಮ್ಮ ತಂಡ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದಷ್ಟು ಸಂತೋಷ ನಮ್ಮದಾಯಿತು ಜೈ ಜವಾನ್ ನಿಜಕ್ಕೂ ನಿಮ್ಮ ಸೇವೆಗೆ ನಾವು ಚಿರರುಣಿಗಳು. ಅಂತಹುದರಲ್ಲಿ ನಿಮ್ಮ ಸೇವಾ ಪದಕ ನಮಗೆ ನೀಡಿ ಗೌರವಿಸಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯಾಗಿದೆ. ಇದನ್ನುಪಡೆಯಲು ನಾವು ಅರ್ಹರೇ ಎಂದು ಮತ್ತೊಮ್ಮೆ ಮಗದೊಮ್ಮೆ ಯೋಚಿಸುವಂತೆ ಮಾಡಿದ್ದು, ಆ ವೀರಯೋಧನಿಗೆ ಧನ್ಯವಾದ ತಿಳಿಸಿ ನಮಿಸಿದ್ದಾರೆ.