ಕೋಲಾರ; ಫೆ.27; ಕೆಆರ್‍ಐಡಿಎಲ್ ಇಲಾಖೆಯಡಿ ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಕೋಟಿಕೋಟಿ ಭ್ರಷ್ಟಾಚಾರವೆಸಗಿರುವ ಆಸ್ತಿಯನ್ನು ಹರಾಜು ಹಾಕಿ ಕಾಮಗಾರಿಗಳನನ್ನು ಪೂರ್ಣಗೊಳಿಸಬೇಕೆಂದು ರೈತಸಂಘದಿಂದ ಭೂಸೇನಾ ಇಲಾಖೆಯೆದುರು ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸುವ ಭೂಸೇನಾ ಇಲಾಖೆ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಆನೆ ನಡೆದಿದ್ದೇ ದಾರಿ ಎಂಬಂತೆ ಅಲ್ಲಿನ ಎಂಜಿನಿಯರ್‍ಗಳಾದ ಕೋದಂಡರಾಮಯ್ಯ, ವಿಜಯ್‍ಕುಮಾರ್ ಅವರು ಇಲಾಖೆಯನ್ನೇ ಮಾರಾಟಕ್ಕೆ ಇಟ್ಟಿದ್ದರೂ ಕ್ರಮಕೈಗೊಳ್ಳಬೇಕಾದ ಜನಪ್ರನಿನಿಧಿಗಳು ನಾಪತ್ತೆಯಾಗಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಜಿಲ್ಲಾದ್ಯಂತ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಇಲ್ಲದೆ ಕೋಟಿಕೋಟಿ ಅನುದಾನವನ್ನು ಕೆಆರ್‍ಐಡಿಎಲ್ ಸಂಸ್ಥೆಗೆ ಬಿಡುಗಡೆಯಾಗುವ ಜೊತೆಗೆ 6 ತಾಲೂಕಿನ ಶಾಸಕರು, ಸಂಸದರು, ಎಂಎಲ್ಸಿಗಳ ಅನುದಾನದಲ್ಲಿ ಸಿಸಿರಸ್ತೆ, ಹೈಮಾಸ್ಟ್ ಲೈಟ್, ಸಮುದಾಯ ಭವನಗಳು, ಚೆಕ್‍ಡ್ಯಾಂಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಇಲಾಖೆಗೆ ಬಿಡುಗಡೆಯಾಗುತ್ತಿದ್ದರೂ ಟೆಂಡರ್ ಇಲ್ಲದೆ ಕಾಮಗಾರಿ ಮಾಡುವುದನ್ನು ಬಂಡವಾಳವಾಗಿಸಿಕೊಂಡು ಅಲ್ಲಿನ ಅಧಿಕಾರಿಗಳು ಕೋಟಿಕೋಟಿ ಹಣ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಲೂಟಿ ಮಾಡಿರುವುದಕ್ಕೆ ಇತ್ತೀಚೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೋದಂಡಪ್ಪ ಹಾಗೂ ವಿಜಯ್ ಕುಮಾರ್ ಅವಧಿಯಲ್ಲಿ ನಡೆದಿರುವ ಹಗರಣಗಳ ಸರಮಾಲೆ ವಿಧಾನಸೌಧದಲ್ಲಿ ಚರ್ಚೆಯಾಗಿ ಇಲಾಖೆಯ ಗೌರವ ಕಳೆದುಕೊಂಡಿದ್ದರೂ ಇನ್ನೂ ಸಹ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣವಿಲ್ಲದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಸಮುದಾಯ ಭವನಗಳ ನಿರ್ಮಾಣದಲ್ಲಿ ಕೋಟಿಕೋಟಿ ಹಗರಣವನ್ನು ನಡೆಸಿ ವರ್ಗಾವಣೆಗೊಂದ ಕೋದಂಡರಾಮಯ್ಯ ಅವರ ಅವಧಿಯಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿಯೇ ಸುಮಾರು 25 ಕೋಟಿ ವೆಚ್ಚದ ಸಮುದಾಯ ಭವನಗಳೇ ನಿರ್ಮಾಣವಾಗದೇ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಹಣ ಲೂಟಿ ಮಾಡಿರುವ ಜೊತೆಗೆ ಸಿಸಿರಸ್ತೆ, ಹೈಮಾಸ್ಟ್ ಲೈಟ್, ಚೆಕ್ ಡ್ಯಾಂಗಳನ್ನು ಕೇಳುವಂತೆ ಇಲ್ಲ. ಇವರ ಹಾದಿಯನ್ನು ಅನುಸರಿಸಿ ವಿಜಯ್ ಕುಮಾರ್ ಅವರು ತಮ್ಮ ಮಗನ ಹೆಸರಿನಲ್ಲಿ ಅಕ್ರಮ ಟೆಂಡರ್ ಸೃಷ್ಠಿ ಮಾಡಿ ಜಿಲ್ಲಾದ್ಯಂತ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕಾದ ಚೆಕ್ ಡ್ಯಾಂ, ದೇವಸ್ಥಾನದ ಸಿಸಿ ರಸ್ತೆ, ಸಮುದಾಯ ಭವನಗಳನ್ನು ನಿರ್ಮಾಣ ಮಾಡದೆಯೇ ಬಿಲ್ ಮಾಡಿಕೊಂಡು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡಿದ್ದರೂ ಈ ಇಬ್ಬರ ಅವಧಿಯಲ್ಲಿ ನಡೆದಿರುವ ಹಗರಣವನ್ನು ತನಿಖೆ ಮಾಡುವಲ್ಲಿ ಹಿರಿಯ ಅಧಿಕಾರಿಗಳು ವಿಫಲವಾಗಿ ಭ್ರಷ್ಟ ಅಧಿಕಾರಿಗಳಿಗೆ ನೆರವಾಗಲು ಕಡಿಮೆ ಹಣ ದುರುಪಯೋಗದ ಕಡತವನ್ನು ಸೃಷ್ಠಿ ಮಾಡಿರುವುದು ದುರಾದೃಷ್ಟಕರ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಕಾಮಗಾರಿ ಪೂರ್ಣಗೊಂಡರೆ ಟೈಲ್ಸ್ ಇಲ್ಲ, ಟೈಲ್ಸ್ ಇದ್ದರೆ ಸಿಮೆಂಟ್ ಇಲ್ಲ ಇವೆರಡೂ ಇದ್ದರೆ ನಿಗಧಿಯ ಸ್ಥಳದಲ್ಲಿ ಭವನಗಳೇ ಇಲ್ಲದ ಜೊತೆಗೆ ಅಂತರ್ಜಲ ಅಭಿವೃದ್ಧಿಗೆ ನಿರ್ಮಿಸಿರುವ ಚೆಕ್ ಡ್ಯಾಂಗಳು ಹಳೆಯ ಕಾಮಗಾರಿಗಳಿಗೆ ಹೊಸ ರೂಪ ಕೊಟ್ಟು ಹೊಸ ಕಡತವನ್ನು ಸೃಷ್ಠಿ ಮಾಡಿ ಹಣ ಲೂಟಿ ಮಾಡುವ ಜೊತೆಗೆ ಬೇರೆ ಇಲಾಖೆಯ ಕಾಮಗಾರಿಗೆ ತನ್ನದೇ ಕಾಮಗಾರಿ ಎಂದು ಬೇರೆ ಇಲಾಖೆಯ ಜೊತೆ ಒಳಒಪ್ಪಂದ ಮಾಡಿಕೊಂಡು ಹಣವನ್ನು ಲೂಟಿ ಮಾಡಿದ್ದಾರೆ ಎಂದು ದೂರಿದರು.
ಅಕ್ರಮ, ಕಳಪೆ ಕಾಮಗಾರಿಗಳ ಕೇಂದ್ರವಾದ ಸಂಸ್ಥೆಗೆ ಎಂಜಿನಿಯರ್‍ಗಳೇ ಬೆಂಗಾವಲಾಗಿ ನಿಂತಿದ್ದಾರೆ. ಭೂಸೇನಾ ನಿಗಮ ಸರ್ಕಾರಿ ಅಧಿಕಾರಿಗಳಿಗಿಂತ ಗುತ್ತಿಗೆ ಆಧಾರದ ಮೇಲೆ ದುಡಿಯುವ ನೌಕರರೇ ಇಲಾಖೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ತನಗೆ ಬೇಕಾದ ಕಾಮಕಾರಿಗಳನ್ನು ಮಂಜೂರು ಮಾಡಿಸಿಕೊಂಡು ಕಾಮಗಾರಿ ಮಾಡದೆ ಹಣ ಲೂಟಿ ಮಾಡುವ ದಂಧೆಯಾಗಿ ಇಲಾಖೆ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ಇಲಾಖೆಯಲ್ಲಿ 2010 ರಿಂದ ಕೋದಂಡರಾಮಯ್ಯ, ವಿಜಯ್ ಕುಮಾರ್, ಮಂಜುನಾಥ್, ಭಾಸ್ಕರ್ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಇಲಾಖೆಯಲ್ಲಿ ಭ್ರಷ್ಟಾಚಾರತೆಗೆ ಕಡಿವಾಣ ಹಾಕಿ ಸಾರ್ವಜನಿಕರ ಹಣವನ್ನು ವ್ಯರ್ಥವಾಗದಂತೆ ಜನರಿಗೆ ಅನುಕೂಲವಾಗುವ ರೀತಿ ಕಾಮಗಾರಿಗಳನ್ನು ಮಾಡುವ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಎಲ್ಲಾ ದಾಖಲೆಗಳ ಸಮೇತ ನ್ಯಾಯಕ್ಕಾಗಿ ಲೋಕಾಯುಕ್ತ ಇಲಾಖೆ ಮೊರೆ ಹೋಗುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಭೂ ಸೇನಾ ಅಧಿಕಾರಿ ಮಂಜುನಾಥ್ 2010 ರಿಂದ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿರುವ ಸಮುದಾಯ ಭವನಗಳು, ಚೆಕ್ ಡ್ಯಾಂಗಳ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದಿವೆ. ಜೊತೆಗೆ ಯಾರ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎಂಬುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಪತ್ರದ ಮೂಲಕ ತಂದಿದ್ದೇವೆ. ಹಿರಿಯ ಅಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ರಾಜ್ಯ ಪ್ರ.ಕಾ. ಫಾರೂಖ್‍ಪಾಷ, ಬಂಗಾರಿ ಮಂಜು, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಶೈಲ, ಚೌಡಮ್ಮ, ಸುಪ್ರೀಂ ಚಲ, ಚಂದ್ರಪ್ಪ, ಕೋಟೆ ಶ್ರೀನಿವಾಸ್ ಮುಂತಾದವರಿದ್ದರು