ಶ್ರೀನಿವಾಸಪುರ: ಶಿಲ್ಪಿ ಜಕಣಾಚಾರಿ ಅವರಿಂದ ಕೆತ್ತಲ್ಪಟ್ಟಿರುವ ಶಿಲ್ಪಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಉಪ ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿ ಸಮಾರಂಭದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಕಲೆಯ ತೊಟ್ಟಿಲಾಗಲು ಜಕಣಾಚಾರಿ ಅವರಂಥ ಶಿಲ್ಪಿಗಳು ಕಾರಣರಾಗಿದ್ದಾರೆ ಎಂದು ಹೇಳಿದರು.
ವಾಸ್ತು ಶಿಲ್ಪ ಕಲಾ ಪ್ರಕಾರಕ್ಕೆ ಜಕಣಾಚಾರಿ ಮಾದರಿಯಾಗಿದ್ದಾರೆ. ಅವರ ಪರಂಪರೆ ರಾಜ್ಯದಲ್ಲಿ ಇನ್ನೂ ಮುಂದುವರಿದಿದರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವಕರ್ಮ ಸಮುದಾಯ ಜಕಣಾಚಾರಿ ಅವರ ಆದರ್ಶದ ಬೆಳಕಲ್ಲಿ ಕಾರ್ಯನಿರ್ವಹಿಸಬೇಕು. ಕಲಾ ತಪಸ್ವಿಯಾದ ಜಕಣಾಚಾರಿ ಕಲಾ ಪ್ರಪಂಚದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂಬುದನ್ನು ರುಜುವಾತು ಮಾಡಬೇಕು ಎಂದು ಹೇಳಿದರು.
ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೃಷ್ಣಪ್ಪ, ಕೆ.ಸಿ.ಮಂಜುನಾಥ್, ಎಸ್.ಜನಾರ್ಧನ್, ಗುರುರಾಜರಾವ್, ದಿನೇಶ್, ಹರಿ, ಎನ್.ಶಂಕರ್, ನರಸಿಂಹಮೂರ್ತಿ, ವಿಶ್ವನಾಥ್, ಶೈಲ, ನಿರ್ಮಲ, ಶಿಲ್ಪ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ, ರವಿಚಂದ್ರಾಚಾರಿ, ರಾಮಚಂದ್ರಾಚಾರಿ, ಮಂಜುನಾಥ್ ಇದ್ದರು.