ಶ್ರೀನಿವಾಸಪುರ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಮಾಜ ಸೇವೆ ಹಾಗೂ ಮಾನವೀಯ ನಡೆಗೆ ಹೆಸರಾಗಿದೆ ಎಂದು ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಸ್ಕಾರ್ಫ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಸಂಸ್ಥೆಗೆ ಸ್ವಯಂ ಪ್ರೇರಣೆಯಿಂದ ಸೇರಬೇಕು. ಶಿಸ್ತು ಹಾಗೂ ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.
ಸಂಸ್ಥೆಯ ಸ್ಕಾರ್ಫ್ ಧರಿಸುವುದು ಸಮಾಜ ಮುಖಿ ಧೋರಣೆ ಪ್ರತೀಕ. ಶಿಸ್ತಿನ ನಡೆ ಹಾಗೂ ಸಮಾಜ ಸೇವೆಯ ಮೂಲಕ ಸಾರ್ಥಕತೆ ಕಂಡುಕೊಳ್ಳುವ ಒಂದು ವಿಧಾನ. ಸಂಸ್ಥೆಯ ಶಿಕ್ಷಕರು ಮಕ್ಕಳಲ್ಲಿ ದೇಶ ಪ್ರೇಮ ಹಾಗೂ ಸ್ವಚ್ಛತೆ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸಬೇಕು. ದೇಹ ಇರುವುದು ಪರೋಪಕಾರ ಮಾಡಲು ಎಂಬ ಸತ್ಯ ಅರಿಯಬೇಕು. ಪೋಷಕರು, ತಮ್ಮ ಮಕ್ಕಳು ಸೇವಾ ಸಂಸ್ಥೆಗಳಲ್ಲಿ ಶ್ರಮಿಸುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಸಂಸ್ಥೆ ಉಪಾದ್ಯಕ್ಷ ಎಂ.ಸೀತರೆಡ್ಡಿ, ಟಿ.ಎಂ.ರಾಮಚಂದ್ರಗೌಡ, ರೆಡ್ಡಮ್ಮ, ಜಿ.ವಿ.ಚಂದ್ರಪ್ಪ, ಗೌರಿಬಾಯಿ, ವಿಶ್ವನಾಥ್, ಟಿ.ರಮೇಶ್, ಮಂಜುಳ, ಗೋಪಿನಾಥ್, ಜಿ.ಕೆ.ನಾರಾಯಣಸ್ವಾಮಿ ಇದ್ದರು.