ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ನೀಡಿಕೆ ವಿಳಂಬವಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ನೀಡಿದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಆಯುಕ್ತ ಅನೂಪ್ ಕುಮಾರ್ ಪ್ರಕ್ರಿಯೆ ಆರಂಭಕ್ಕೆ ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು.
ಬುಧವಾರ ಆಯುಕ್ತರನ್ನು ಭೇಟಿಯಾದ ವೈಎಎನ್, ಕೋಲಾರ ಜಿಲ್ಲೆಯಲ್ಲಿ ಬಡ್ತಿ ಪ್ರಕ್ರಿಯೆ ವಿಳಂಬವಾಗಿದೆ, ಆದರೆ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಬಡ್ತಿ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯಲ್ಲೂ ಬಡ್ತಿ ಸಂಬಂಧ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿ, ದಾಖಲಾತಿಗಳ ಪರಿಶೀಲನೆ ಮಾಡಲಾಗಿತ್ತು. ಆದರೆ ಅಂತಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ವೇಳೆಗೆ ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾದ್ದರಿಂದಾಗಿ ಪಟ್ಟಿ ಪ್ರಕಟಗೊಳ್ಳಲಿಲ್ಲ ಎಂದು ತಿಳಿಸಿದರು.
ಸಂಬಂಧಿಸಿದ ಶಿಕ್ಷಕರು ಚುನಾವಣೆ ನೀತಿ ಸಂಹಿತೆಮುಗಿದ ನಂತರ ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಮನವಿ ಸಲ್ಲಿಸಿದ್ದು, ಡಿಡಿಪಿಐ ಅವರು 2020-21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಬಡ್ತಿ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.
ಆದರೆ ಈಗಾಗಲೇ ಕಳೆದ ಡಿ.19 ರಂದು ಬಳ್ಳಾರಿ ಜಿಲ್ಲೆ, ಡಿ.28 ರಮದು ಕಲಬುರ್ಗಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ಪ್ರೌಢಶಾಲಾ ಶಿಕ್ಷಕರ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಮುಗಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಬಡ್ತಿ ಪ್ರಕ್ರಿಯೆ ಮುಗಿಸಬೇಕು, ಶಿಕ್ಷಕರಿಗೆ ಸಿಗುವ ಈ ಸೌಲಭ್ಯ ಒದಗಿಸಲು ಇಲಾಖೆಯ ಮೀನಾಮೇಷ ಏಕೆ ಎಂದು ಪ್ರಶ್ನಿಸಿದ ಅವರು, ಕ್ರಮಕ್ಕೆ ಒತ್ತಾಯಿಸಿದರು.
ಆದ್ದರಿಂದ ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಿ ಕೂಡಲೇ ಬಡ್ತಿ ಪ್ರಕ್ರಿಯೆ ಮುಗಿಸಿ ಅರ್ಹ ಶಿಕ್ಷಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಆಯುಕ್ತ ಅನೂಪ್ ಕುಮಾರ್, ಕೂಡಲೇ ಬಡ್ತಿ ಪ್ರಕ್ರಿಯೆ ನಡೆಸಲು ಡಿಡಿಪಿಐ ಅವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರಲ್ಲದೇ ಮನವಿಯ ಮೇಲೆಯೇ ಆದೇಶ ಮಾಡಿದರು.
ಈ ಸಂದರ್ಭದಲ್ಲಿ ವೈಎಎನ್ ಅವರೊಂದಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಖಜಾಂಚಿ ಎಸ್.ಚೌಡಪ್ಪ ಹಾಜರಿದ್ದರು.