ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶಾಲಾಭಿವೃದ್ಧಿ ಸಮಿತಿ ಸದಸ್ಯರು. ಸಮುದಾಯದ ಸಹಾಯ ಪಡೆದು ಶಾಲಾಭಿವೃದ್ಧಿ ಮಾಡಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎ.ಜಯರಾಮರೆಡ್ಡಿ ಹೇಳಿದರು.
ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಸದಸ್ಯರಿಗೆ ಬುಧವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರು ಸಾಂಘಿಕ ಪ್ರಯತ್ನ ನಡೆಸಬೇಕು. ಮುಖ್ಯವಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನೆ ನಡೆಯುತ್ತಿದೆ. ಪ್ರಾಥಮಿಕ ಹಂತದಲ್ಲಿಯೇ ಇಂಗ್ಲೀಷ್ ಕಲಿಸಲಾಗುತ್ತಿದೆ. ನುರಿತ ಶಿಕ್ಷಕರ ಸೇವೆಯೂ ಲಭ್ಯವಿದೆ. ಪರಿಸ್ಥಿತಿ ಹೀಗಿರುವಾಗಿ ಸರ್ಕಾರದ ಸೌಲಭ್ಯ ಪಡೆಯಲು ಸರ್ಕಾರಿ ಶಾಲೆ ಅತ್ಯುತ್ತಮ ಆಯ್ಕೆ ಎಂಬ ವಿಷಯವನ್ನು ಪೋಷಕರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷೆ ಜ್ಯೋತಿ, ಮುಖ್ಯ ಶಿಕ್ಷಕಿ ಲಕ್ಷ್ಮೀನರಸಮ್ಮ, ಶಿಕ್ಷಕ ಸೋಮಶೇಖರರೆಡ್ಡಿ, ಸಂಪನ್ಮೂಲ ವ್ಯಕ್ತಿ ರಾಜಣ್ಣ ಇದ್ದರು.