ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಶಾಲಾ ಕಟ್ಟಡಗಳು ಶಿಥಿಲ – ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ-ಗೋವಿಂದರಾಜು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಶಾಲೆಗಳ ಕಟ್ಟಡಗಳು ಬಹುತೇಕ ಅತಿವೃಷ್ಟಿ ಮಳೆಯಿಂದ ಶಿಥಿಲಗೊಂಡಿರುವುದು ಜಿಲ್ಲಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿದ್ದು ಈ ಸಂಬಂಧ ಇವುಗಳಿಗೆ ಪರ್ಯಾಯವಾಗಿ ರಿಪೇರಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಆದಷ್ಟು ಬೇಗ ಈ ಕಾರ್ಯಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ತಿಳಿಸಿದರು.
ಅವರು ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಪುರು ಇಲ್ಲಿಗೆ ಭೇಟಿ ನೀಡಿ ಒಂದೇ ಕಟ್ಟಡದಲ್ಲಿ ಬಹುತೇಕ ತರಗತಿಗಳು ನಡೆಯುತ್ತಿರುವುದನ್ನು ಗಮನಿಸಿ, ಆದಷ್ಟು ಬೇಗ ಕೊಠಡಿಗಳ ವ್ಯವಸ್ಥೆ ಇಲಾಖೆ-ಅನುದಾನ ಅಥವಾ ತಮ್ಮ ಅನುದಾನದಲ್ಲಿ ಹೊಸ ಕಟ್ಟಡವನ್ನು ಕಟ್ಟಿಕೊಡಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಹ ಸರ್ಕಾರಿ ಶಾಲಾ ಕಟ್ಟಡಗಳು ಹಾಳಾಗಿದ್ದು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತೊಂದರೆಯಾಗುತ್ತಿದೆ ಶಿಕ್ಷಣದ ಜೊತೆಗೆ ಭೌತಿಕ ಸೌಲಭ್ಯಗಳು ಅಷ್ಟೇ ಮುಖ್ಯ ಆದ್ದರಿಂದ ಜಿಲ್ಲಾಡಳಿತ ಸರ್ಕಾರಿ ಶಾಲೆಗಳನ್ನು ರಿಪೇರಿ ಅಥವಾ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಇದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಈಗಾಗಲೇ ಕಳುಹಿಸಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸ್ಥಳದಲ್ಲಿದ್ದು ಮಕ್ಕಳಿಗೆ ಆಸನ ವ್ಯವಸ್ಥೆ ಮಾಡಿ ಇರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಶಾಲಾ ಕಟ್ಟಡದ ಪಕ್ಕದಲ್ಲೇ ಇದ್ದ ಒಂದು ಬಾಡಿಗೆ ಕಟ್ಟಡವನ್ನು ಈಗಾಗಲೇ ತಾಲೂಕು ಪಂಚಾಯಿತಿ ಅಧಿಕಾರಿಗಳು ಸೂಚಿಸಿದ್ದು ಅದರಂತೆ ಒಂದು ತರಗತಿಯನ್ನು ಆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಗ್ರಾಮದ ಹಿರಿಯರು ಊರಿನ ಪಕ್ಕದಲ್ಲಿ ಎರಡು ಎಕರೆ ಸರ್ಕಾರಿ ಜಮೀನು ಇದ್ದು ಇದನ್ನು ಸಹ ಶಾಲೆಗೆ ಬಳಸಿಕೊಳ್ಳಬಹುದು ಎಂದಾಗ ಅದರ ಸಂಪೂರ್ಣ ದಾಖಲೆಗಳನ್ನು ಪಡೆಯಲು ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ಬಿಇಒ ಅಶೋಕ್ ಮತ್ತಿತರರು ನಲಿಕಲಿ ಮಕ್ಕಳೊಂದಿಗೆ ನಲಿಕಲಿ ಹಾಡನ್ನು ಹಾಡಿ ರಂಜಿಸಿದರು ಇದೇ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್ ಮುಖ್ಯಶಿಕ್ಷಕ ಅಶ್ವಥ್ ಸಿಬ್ಬಂದಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.