

ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಕೂಡಲೇ ಆತ SC ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಎಸ್ಸಿ/ ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಗುಂಟೂರು ಜಿಲ್ಲೆಯ ಕೊತ್ತಪಾಲೆಂನ ಪಾದ್ರಿ ಚಿಂತದ ಆನಂದ್ ಎಂಬುವವರು ಎಸ್ಸಿ/ ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್. ಹರಿನಾಥ್ ಅವರು ಈ ತೀರ್ಪು ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.ಹತ್ತು ವರ್ಷಕ್ಕೂ ಹೆಚ್ಚು ಕಾಲ ಪಾದ್ರಿಯಾಗಿದ್ದ ಆನಂದ್ ಅವರು, ಅಕ್ಕಲಾ ರಾಮಿರೆಡ್ಡಿ ಮತ್ತಿತರರು ಜಾತಿಯ ಆಧಾರದ ಮೇಲೆ ನನ್ನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಜನವರಿ 2021 ರಂದು ಚಂದೋಲು ಪೊಲೀಸರಿಗೆ ದೂರು ಸಹ ನೀಡಿದ್ದರು. ಇನ್ನೂ ಪೊಲೀಸರು ಎಸ್ಸಿ/ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ, ಈ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ರಾಮಿರೆಡ್ಡಿ ಮತ್ತಿತರರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು.ಆನಂದ್ ಅವರು ಹತ್ತು ವರ್ಷಗಳ ಕಾಲ ಪಾದ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ ಸಂವಿಧಾನ (ಪರಿಶಿಷ್ಟ ಜಾತಿಗಳು – Schedule Caste) ಆದೇಶ, 1950 ರ ಅಡಿಯಲ್ಲಿ ಎಸ್ಸಿ ಸದಸ್ಯರಾಗಿ ಅರ್ಹತೆ ಪಡೆದಿಲ್ಲ ಎಂದು ಅರ್ಜಿದಾರರ ವಕೀಲ ಫಣಿ ದತ್ ವಾದಿಸಿದ್ದಾರೆ.
ಆನಂದ್ ಪರ ವಕೀಲ ಈರ್ಲ ಸತೀಶ್ ಕುಮಾರ್ ಅವರು ಪ್ರತಿವಾದ ಮಂಡಿಸಿ, ಆನಂದ್ ಅವರು SC ಹಿಂದೂ ಜಾತಿ ಪ್ರಮಾಣಪತ್ರವನ್ನು ಹೊಂದಿದ್ದು, ಕಾಯ್ದೆಯಡಿ ರಕ್ಷಣೆಗೆ ಅರ್ಹತೆ ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು.ಸುಳ್ಳು ದೂರು ದಾಖಲಿಸುವ ಮೂಲಕ ಆನಂದ್ ಅವರು ಎಸ್ಸಿ/ ಎಸ್ಟಿ ಕಾಯ್ದೆಯನ್ನು ದುರುಪಯೋಗ (misused) ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಆನಂದ್ ಪಾದ್ರಿಯಾಗಿ ಒಂದು ದಶಕದವರೆಗೆ ಕಾರ್ಯ ನಿರ್ವಹಿಸಿರುವುದನ್ನು ಸಾಕ್ಷಿಗಳು ದೃಢಪಡಿಸಿವೆ.
ಅವರ ಸ್ಥಿತಿಯನ್ನು ಪರಿಶೀಲಿಸದೆ ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಪೊಲೀಸರ ಕ್ರಮವನ್ನು ಟೀಕಿಸಿದ ನ್ಯಾಯಮೂರ್ತಿ ಹರಿನಾಥ್ ಅವರು ರಾಮಿರೆಡ್ಡಿ ಮತ್ತಿತರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದರು ಎಂದು ವರದಿಯಿಂದ ತಿಳಿದು ಬಂದಿದೆ