ಕೋಲಾರ: ಸಾವಿತ್ರಿ ಬಾಯಿ ಪುಲೆ ಆದರ್ಶವನ್ನು ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣವಂತರಾಗಿ ಸದೃಢ ಸಮಾಜ ನಿರ್ಮಾಣ ಮಾಡಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ರೋಟರಿ ಸೆಂಟ್ರಲ್ ಕಟ್ಟಡದಲ್ಲಿ ಜಿಲ್ಲಾ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರ ಸಂಘದವತಿಯಿಂದ ಆಯೋಜಿಸಲಾಗಿದ್ದ ಸಾವಿತ್ರಿ ಬಾಯಿ ಪುಲೆ ಜನ್ಮ ದಿನಾಚರಣೆ ಮತ್ತು ಸಾಧಕ ಹತ್ತು ಮಂದಿ ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಯಾವುದೇ ಮನುಷ್ಯನನ್ನು ಉನ್ನತ ಸ್ಥಾನಕ್ಕೇರಿಸುತ್ತದೆ, ಅದರಲ್ಲೂ ಮಹಿಳೆಯರು ವಿದ್ಯಾವಂತರಾದರೆ ಇಡೀ ಕುಟುಂಬ ವಿದ್ಯಾವಂತರಾದಂತಾಗುತ್ತದೆ, ಮಹಿಳೆಯರ ವಿದ್ಯಾಭ್ಯಾಸಕ್ಕೆ ಅಡ್ಡಿ ಇದ್ದ ಸಂದರ್ಭದಲ್ಲಿ ಧೈರ್ಯದಿಂದ ಕಷ್ಟ ಸವಾಲುಗಳನ್ನು ಎದುರಿಸಿ ಸಾವಿತ್ರಿ ಬಾಯಿಪುಲೆ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ್ದರು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟಿದ್ದರೆಂದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರ ಜನ್ಮ ಜಯಂತಿಯಂತು ಸಾಧಕ ಶಿಕ್ಷಕರಿಯನ್ನು ತಮ್ಮ ಸಂಘ ಹಿಂದಿನಿಂದಲೂ ಸನ್ಮಾನಿಸಿಕೊಂಡು ಬರುತ್ತಿದೆ, ಇದೀಗ ರೋಟರಿ ಸೆಂಟ್ರಲ್ಸಹಭಾಗಿತ್ವದಲ್ಲಿ ಹತ್ತು ಮಂದಿ ಶಿಕ್ಷಕಿಯರನ್ನು ಗುರುತಿಸಿ ಸನ್ಮಾನಿಸುತ್ತಿದೆಯೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರ ಹೋರಾಟದ -ಫಲವಾಗಿ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಪಾಲುದಾರಿಕೆ ಪಡೆದು ಮಿಂಚುವಂತಾಗಿದೆ ಎಂದರು.
ಸಾವಿತ್ರಿ ಬಾಯಿ ಪುಲೆ ನೆನಪಿನಲ್ಲಿ ಸಾಧಕ ಶಿಕ್ಷಕಿಯರಾದ ಕೆ.ಎಸ್.ಸುನಂದಮ್ಮ, ಎಂ.ಮಂಜುಳ, ಎನ್.ರಮ, ಎಂ.ಮಂಜುಳ, ಎನ್.ಪುಷ್ಪ, ಎಂ.ಚೌಡಮ್ಮ, ಟಿ.ಸುಧಾ, ಟಿ.ಜಿ.ಹೇಮಲತಾ, ವಿ.ಶಾಮಲಮ್ಮ, ಪಾರ್ವತಮ್ಮರನ್ನು ಸಿಎಂಆರ್ ಶ್ರೀನಾಥ್ ಸಾವಿತ್ರಿ ಪುಲೆ ಭಾವಚಿತ್ರ ನೀಡಿ ಗೌರವಿಸಿ ಸನ್ಮಾನಿಸಿದರು.
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್, ಜ್ನಾನ ವಿಜ್ನಾನ ಸಮಿತಿಯ ಕಾರ್ಯದರ್ಶಿ ಡಿ.ಎನ್.ಮುಕುಂದ, ಎಲ್.ಶ್ರೀನಿವಾಸ್, ಸಿ.ವಿ.ನಾಗರಾಜ್ ಹಾಜರಿದ್ದರು.
ರಮಾ ಪ್ರಾರ್ಥಿಸಿ, ಬಿ.ಎಂ.ನಾರಾಯಣಸ್ವಾಮಿ ಸ್ವಾಗತಿಸಿ, ಕರ್ನಾಟಕ ಜ್ನಾನ ವಿಜ್ನಾನ ಸಮಿತಿ ಕಾರ್ಯದರ್ಶಿ ಶರಣಪ್ಪ ಜಮಾದಾರ್ ನಿರೂಪಿಸಿ, ಸಹ ಕಾರ್ಯದರ್ಶಿ ಕೆ.ವಿ.ಜಗನ್ನಾಥ್ ವಂದಿಸಿದರು.