

ಕೋಲಾರ; ಸೆ.10: ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ ಜನ ಸಾಮಾನ್ಯರ ಅಮೂಲ್ಯ ಪ್ರಾಣ ರಕ್ಷಣೆ ಮಾಡುವಂತೆ ರೈತಸಂಘದಿಂದ ಹದಗೆಟ್ಟಿರುವ ಕೋಲಾರಮ್ಮನ ಕೆರೆ ಪಕ್ಕದ ರಸ್ತೆಯಲ್ಲಿ ಜನಪ್ರತಿನಿಧಿಗಳಿಗೆ ಹೂವಿನ ಅಭಿಷೇಕದ ಮೂಲಕ ಹೋರಾಟ ಮಾಡಿ ಲೋಕೋಪಯೋಗಿ ಇಂಜಿನಿಯರ್‍ಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೋಲಾರ ಜಿಲ್ಲೆಯ ರಸ್ತೆಗಳನ್ನು ಸಿಂಗಪೂರ್ ರಸ್ತೆಗಳನ್ನಾಗಿ ಮಾಡಿರುವ ಜನಪ್ರತಿನಿಧಿಗಳ ಮುಖವಾಡ ಧರಿಸಿ ಟೇಪ್ ಕಟ್ ಮಾಡುವ ಮೂಲಕ ಜಿಲ್ಲೆಯ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿರುವ ರಾಜಕಾರಣಿಗಳ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಠಿಗೆ ರೈತ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದಿದ್ದರೂ ಸ್ಥಳೀಯವಾಗಿ ವಾಸ್ತವ ಹೂಡಿ ಸಮಸ್ಯೆ ಬಗೆಹರಿಸಬೇಕಾದ ಉಸ್ತುವಾರಿ ಸಚಿವರು ಜನರ ಬದುಕಿನ ಮೇಲೆ ಜನೋತ್ಸವ ಕಾರ್ಯಕ್ರಮ ಮಾಡುವ ಮುಖಾಂತರ ಬಿಜೆಪಿ ಸರ್ಕಾರ ಜನ ವಿರೋಧಿ ಸರ್ಕಾರ ಎಂದು ಸಾಭೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಕಿದ ಬಣ್ಣ ಮಳೆ ನೀರಿನಲ್ಲಿ ಕಳಚಿ ಹೋಗುತ್ತದೆ ಎಂಬ ಗಾಧೆ ಮಾತಿನಂತೆ ಜಿಲ್ಲಾದ್ಯಂತ ರಾಜ್ಯ, ರಾಷ್ಟ್ರೀಯ ಗ್ರಾಮೀಣ ಪ್ರದೇಶದ ರಸ್ತೆಗಳ ಕಳಪೆ ಕಾಮಗಾರಿಯ ಬಣ್ಣ ಸಹ ಮಳೆಗಾಲದಲ್ಲಿ ಬಯಲಿಗೆ ಬರುವುದಕ್ಕೆ ಉದಾಹರಣೆಯಾಗಿದೆ.
ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಹಿಡಿದು ಹಿರಿಯ ಅಧಿಕಾರಿಗಳ ನಿವಾಸಕ್ಕೆ ಕೂಗಳತೆಯಲ್ಲಿರುವ ಕೋಲಾರಮ್ಮನ ಕೆರೆ ಪಕ್ಕದ ರಸ್ತೆಯ ಅವ್ಯವಸ್ಥೆ ಕಣ್ಣ ಮುಂದೆ ಇದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತಾಗಿದ್ದಾರೆ. ಹೃದಯ ಭಾಗದ ರಸ್ತೆಗಳೇ ಈ ರೀತಿಯಿದ್ದರೆ ಇನ್ನು ಗ್ರಾಮೀಣ ಪ್ರದೇಶದ ರಸ್ತೆಗಳ ಪರಿಸ್ಥಿತಿ ಊಹೆ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಯಾವುದೇ ರಸ್ತೆ ಅಭಿವೃದ್ಧಿಪಡಿಸುವಾಗ ಮಳೆ ನೀರು ಸರಾಗವಾಗಿ ಚರಂಡಿ ಮೂಲಕ ಮೂಲ ಕಾಲುವೆಗೆ ಹರಿಯಬೇಕು. ಆದರೆ ಇಂಜಿನಿಯರ್ ಬೇಜವಾಬ್ದಾರಿಯಿಂದ ಬೇಕಾ ಬಿಟ್ಟಿ ಚರಂಡಿ ವ್ಯವಸ್ಥೆಯೇ ರಸ್ತೆಗಳ ಅವೈಜ್ಞಾನಿಕತೆ ಹಾಗೂ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ. ರಸ್ತೆಯ ಗುಂಡಿ, ಅವ್ಯವಸ್ಥೆಯಿಂದ ವಾಹನ ಸವಾರರು ಮೃತಪಟ್ಟು ಅಥವಾ ಅಂಗವಿಕಲರಾದರೆ ಸುಪ್ರೀಂಕೋರ್ಟ್ ಆದೇಶದಂತೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಆಸ್ತಿ ಹರಾಜು ಹಾಕಿ ಪರಿಹಾರ ನೀಡುವ ಕಾನೂನಿಗೆ ಜೀವ ತುಂಬಿದರೆ ಅವ್ಯವಸ್ಥೆಯಿಂದ ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹಳೆಯ ರಸ್ತೆಗೆ ಹೊಸ ತೇಪೆ ನೆಪದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನರ ತೆರಿಗೆ ಹಣವನ್ನು ಕಳಪೆ ಕಾಮಗಾರಿ ಮಾಡುವ ಮುಖಾಂತರ ಹಗಲು ದರೋಡೆ ಮಾಡಿ ತೇಪೆ ಹಾಕಿದ ಒಂದು ವಾರಕ್ಕೆ ಮತ್ತೆ ಅದೇ ಸ್ಥಿತಿಗೆ ರಸ್ತೆಗಳು ಬರುತ್ತಿರುವುದು ವಿಪರ್ಯಾಸ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಪತ್ರಿಕಾ ಮಾಧ್ಯಮ ಮುಖಾಂತರ 2 ದಿನದಲ್ಲಿ ಮುಕ್ತಿ ನೀಡಿ ಸಮಸ್ಯೆ ಬಗೆಹರಿಸುತ್ತೇನೆಂಬ ಹೇಳಿಕೆ ಬೆನ್ನಲ್ಲೇ ಗುತ್ತಿಗೆದಾರರು ಮಾಡಿದ 40% ಆರೋಪಕ್ಕೆ ಉತ್ತರ ನೀಡದೆ ಜಿಲ್ಲೆಯಿಂದ ನಾಪತ್ತೆಯಾಗಿರುವ ಉಸ್ತುವಾರಿ ಸಚಿವರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ವಾಹನ ಸವಾರರ ಪರದಾಟ:
ನಗರದ ರಸ್ತೆಗಳು ಹದಗೆಟ್ಟಿರುವುದರಿಂದ ನಗರ ವಾಸಿಗಳು ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುತ್ತಿದ್ದರೆ ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ರಸ್ತೆ ಹಾಳಾಗಿ ಹಳ್ಳಕೊಳ್ಳಗಳಿಂದ ದೊಡ್ಡ ದೊಡ್ಡ ಕಂದಕಗಳು ಸೃಷ್ಠಿಯಾಗಿ ಮಳೆ ಬಿದ್ದರೆ ರಸ್ತೆ ಹಾಗೂ ಹಳ್ಳಕ್ಕೆ ವ್ಯತ್ಯಾಸ ತಿಳಿಯದೆ ಅಪಘಾತಗಳಾಗಿ ಮೃತಪಟ್ಟಿರುವ ಜೊತೆಗೆ ಕೈ ಕಾಲುಗಳು ಕಳೆದುಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಇದ್ದರೂ ಸಮಸ್ಯೆ ಮಾತ್ರ ಗಂಭೀರವಾಗಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಜಿನಿಯರ್ ಬರುವುದೇ ಅಪರೂಪ:
ಹದಗೆಟ್ಟಿರುವ ರಸ್ತೆಗಳ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ಕರೆ ಮಾಡಿದರೆ ಬೇಜವಾಬ್ದಾರಿ ಉತ್ತರ ನೀಡುವ ಜೊತೆಗೆ ವಿಧಾನಸೌಧದಿಂದ ಇಲಾಖೆಯ ಗುಮಾಸ್ತನವರೆಗೂ ಕಮೀಷನ್ ನೀಡಿ ಉಳಿದ ಹಣದಲ್ಲಿ ರಸ್ತೆ ಕಾಮಗಾರಿ ಮಾಡಿದರೆ ಹದಗೆಡದೆ ಸಿಂಗಪೂರ್ ರಸ್ತೆಯಾಗುತ್ತದೆಯೇ ಎಂದು ಭ್ರಷ್ಟಾಚಾರದ ಬಗ್ಗೆ ಅವರೇ ಹೇಳಿಕೊಳ್ಳುತ್ತಾರೆ.
ಇನ್ನು ಕಾಮಗಾರಿ ಪ್ರಾರಂಭ ಮಾಡಲು ಗುದ್ದಲಿಪೂಜೆ ಮಾಡಿ ನಾಪತ್ತೆಯಾಗುವ ಜನಪ್ರತಿನಿಧಿಗಳು ಉದ್ಘಾಟನೆಗೆ ತಾ ಮುಂದು ನಾ ಮುಂದು ಎಂದು ಬರುತ್ತಾರೆ. ಅದರ ಜೊತೆಗೆ ಹಂತ ಹಂತದ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಕ್ಯೂ.ಸಿ. ಅಧಿಕಾರಿಗಳು ಕಚೇರಿಯಿಂದಲೇ 10% ಕಮೀಷನ್ ಪಡೆದು ಕಳಪೆಯಾಗಿದ್ದರೂ ಗುಣಮಟ್ಟದ ಪ್ರಮಾಣಪತ್ರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ವಾರದ ಒಳಗೆ ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸದೇ ಇದ್ದರೆ ಬುಡ್ಡಿ ದೀಪಗಳೊಂದಿಗೆ ಎಲ್ಲಾ ಶಾಸಕರ ಮನೆ ಮುಂದೆ ಸಾವಿನ ಹಲಗೆ ಚಳುವಳಿ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಂಜಿನಿಯರ್ ಅವರು, ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಜೊತೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರಸ್ತೆಗಳ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿಭಾಗೀಯ ಕಾರ್ಯದರ್ಶಿ ಫಾರೂಖ್ ಪಾಷ, ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ವಿಶ್ವ, ವಿಜಯ್‍ಪಾಲ್, ನಗರ ಘಟಕದ ಅದ್ಯಕ್ಷ ಅದಿಲ್ ಪಾಷ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ಗೋವಿಂದಪ್ಪ, ಚಂದ್ರಪ್ಪ, ಗಿರೀಶ್, ಪುತ್ತೇರಿ ರಾಜು, ಚಂದ್ರಪ್ಪ ಶೈಲಾ, ರಾಧ, ಚೌಡಮ್ಮ. ಮುಂತಾದವರಿದ್ದರು.





