ನಂಗಲಿ, ಅ-21,ಮುಳಬಾಗಿಲು ಬೈಪಾಸ್‍ನಿಂದ ನಂಗಲಿ ಗಡಿಭಾಗದವರೆಗೂ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ಸರಿಪಡಿಸುವವರೆಗೂ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿ ಜನ ಸಾಮಾನ್ಯರ ಅಮೂಲ್ಯ ಪ್ರಾಣವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಟೋಲ್ ಮೇನೇಜರ್ ಅಜಿತ್ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ತಪ್ಪು ಮಾಡದ ಜನ ಸಾಮಾನ್ಯರ ಪ್ರಾಣ ತೆಗೆಯುವ ಯಮದೂತ ರಸ್ತೆಯಾಗಿ ಮಾರ್ಪಟ್ಟಿದೆ. ಸಾವಿರಾರು ಕೋಟಿ ಜನರ ತೆರಿಗೆ ಹಣದಲ್ಲಿ ಅಭಿವೃದ್ದಿ ಪಡಿಸಿದರುವ ರಸ್ತೆಯಲ್ಲಿ ತಾನು ದುಡಿದ ಹಣವನ್ನು ನೀಡಿ ಅಮೂಲ್ಯವಾದ ಪ್ರಾಣವನ್ನು ತನ್ನ ಕೈಯಾರೆ ಕಳೆದುಕೊಳ್ಳುವ ಮಟ್ಟಕ್ಕೆ ರಸ್ತೆ ಹದಗೆಟ್ಟಿದರೂ ಸರಿಪಡಿಸಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ರೈತ ಸಂಘದ ಯುವ ರೈತ ಮುಖಂಡ ನಂಗಲಿ ನಾಗೇಶ್ ಹಾಗೂ ಪದ್ಮಘಟ್ಟ ಧರ್ಮ ರಸ್ತೆ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯದ ಆರ್ಥಿಕತೆಯ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುವ ರಸ್ತೆ ಅಭಿವೃದ್ದಿಗೆ ಹಣವನ್ನು ಬಿಡುಗಡೆ ಮಾಡುತ್ತಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಒಳ ಒಪ್ಪಂದದಿಂದ ಕಮೀಷನ್ ಹಾವಳಿ ಹೆಚ್ಚಾಗಿ ಅಭಿವೃದ್ದಿ ಪಡಿಸಬೇಕಾದ ರಸ್ತೆಗಳು ಯಮದೂತ ರಸ್ತೆಗಳಾಗಿ ಮಾರ್ಪಟ್ಟಿವೆ ಎಂದು ಆರೋಪ ಮಾಡಿದರು.
ಸಮರ್ಪಕವಾದ ರಾಜಕಾಲುವೆಗಳ ನಿರ್ವಹಣೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ ಸುರಿದರೆ ಮಳೆ ನೀರು ಸರಾಗವಾಗಿ ಹರಿಯಲು ರಾಜ ಕಾಲುವೆಗಳು ಇಲ್ಲದೆ ರಸ್ತೆಗಳಿಗೆ ನುಗ್ಗಿ ಕೆರೆ ಕುಂಟೆಗಳಾಗಿ ಮಾರ್ಪಟ್ಟು ವಾಹನ ಸವಾರರಿಗೆ ರಸ್ತೆಯೋ, ಕೆರೆಯೋ ತಿಳಿಯದೇ ಅಪಘಾತಗಳಾಗಿ ಕೈಕಾಲು ಕಳೆದುಕೊಳ್ಳುವ ಜೊತೆಗೆ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡು ಅವರನ್ನೇ ನಂಬಿರುವ ಕುಟುಂಬವನ್ನು ಬೀದಿಪಾಲು ಮಾಡುವ ಮಟ್ಟಕ್ಕೆ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿ ಅಮಾಯಕರ ಪ್ರಾಣದ ಜೊತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಚಲ್ಲಾಟವಾಡುತ್ತಿದ್ದಾರೆಂದು ಕಿಡಿಕಾಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪ್ರತಿ ವರ್ಷ ನಡೆಯುವ ರಸ್ತೆ ಸುರಕ್ಷಾ ಸಾಪ್ತಾಹ ಜಿಲ್ಲಾಧಿಕಾರಿಗಳ ಕಛೇರಿಗೆ ಸೀಮಿತವಾಗಿದೆ. ಕಾನೂನಿನ ಪ್ರಕಾರ ಹೆದ್ದಾರಿಯಲ್ಲಿ ಯಾವುದೇ ಗುಂಡಿಗಳು ಇರಬಾರದು ಜೊತೆಗೆ ಪ್ರತಿ ರಾತ್ರಿ ವಿದ್ಯುತ್ ದೀಪಗಳು ನಿರಂತರವಾಗಿ ಉರಿಯಬೇಕು. ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಅನುಕೂಲವಾಗಲು ಪ್ರತಿ ಗೇಟ್‍ಬಳಿ ತಂಗುದಾಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆದರೆ ಎನ್.ಹೆಚ್.ಎ.ಐ ಅಧಿಕಾರಿಗಳ ಭ್ರಷ್ಟಾಚಾರ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಹೆದ್ದಾರಿಯಾಗಿ ಮಾರ್ಪಟ್ಟಿದ್ದರೂ ಸರಿಪಡಿಸಬೇಕಾದ ಅಧಿಕಾರಿಗಳ ನಾಪತ್ತೆಯಾಗಿದ್ದು, ಗುತ್ತಿಗೆದಾರರು ಮಾತ್ರ ವಾಹನ ಸವಾರರ ಬಳಿ ಹಗಲು ದರೋಡೆ ಮಾಡುತ್ತಿದ್ದಾರೆಂದು ಆರೋಪ ಮಾಡಿದರು.
ಹೆದ್ದಾರಿ ಅವ್ಯವಸ್ಥೆ ಯಾವ ಮಟ್ಟಕ್ಕೆ ಹದಗೆಟ್ಟಿದೆ ಎಂದರೆ ಹೆದ್ದಾರಿ ಪಕ್ಕದಲ್ಲಿ ಅಕ್ರಮ ಡಾಬಾಗಳು ವಾಣಿಜ್ಯ ಮಳಿಗೆಗಳು ಮದುವೆ ಮಂಟಪದ ಮಾಲೀಕರು ಪಾದಾಚಾರಿ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಅಕ್ರಮ ಒತ್ತುವರಿದಾರರಿಗೆ ನೊಟೀಸ್ ಸಹ ನೀಡದೆ ಬೇಜವಾಬ್ದಾರಿಯಿಂದ ಲ್ಯಾಂಕೋ ಅಧಿಕಾರಿಗಳು ವರ್ತನೆ ಮಾಡುವ ಜೊತೆಗೆ ಅಪಘಾತವಾದಾಗ ತುರ್ತು ಪರಿಸ್ಥಿತಿಯಲ್ಲಿ ಅವಶ್ಯಕತೆ ಇರುವ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಇದರಿಂದ ರಾಷ್ಟ್ರೀಯ ಹೆದ್ದಾರಿ ಯಮದೂತ ಹೆದ್ದಾರಿಯಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.
ಒಂದು ವಾರದೊಳಗೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಸರಿಪಡಿಸಿ ರಾತ್ರಿವೇಳೆ ವಿದ್ಯುತ್‍ದೀಪ ನಿರಂತರವಾಗಿ ಉರಿಯಬೇಕು. ಒತ್ತುವರಿ ತೆರವುಗೊಳಿಸಿ ಮಳೆ ನೀರು ರಸ್ತೆ ಮೇಲೆ ಬರದೆ ಸರಾಗವಾಗಿ ಕೆರೆಗಳಿಗೆ ಹರಿಯುವಂತೆ ಅಭಿವೃದ್ದಿ ಪಡಿಸಬೇಕು. ಇಲ್ಲವಾದರೆ ಜಾನುವಾರುಗಳ ಸಮೇತ ಟೋಲ್ ಸಂಗ್ರಹದ ಕೇಂದ್ರಗಳ ಮುಂದೆ ಆಹೋರಾತ್ರಿ ದರಣಿ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಟೋಲ್ ಮ್ಯಾನೇಜರ್ ಅಜಿತ್ ರವರು ರಸ್ತೆಯಲ್ಲಿ ಅವ್ಯವಸ್ಥೆ ಇರುವುದು ಸತ್ಯ ವ್ಯವಸ್ಥಾಪಕರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮುಳಬಾಗಿಲು ತಾಲ್ಲೂಕು ಯಲುವಳ್ಳಿ ಪ್ರಭಾಕರ್, ಕುರುಬರಹಳ್ಳಿ ರಾಮಕೃಷಣಪ್ಪ, ವೆಂಕಟೇಶಪ್ಪ, ರಾಜ್ಯ ಪ್ರ.ಕಾರ್ಯದರ್ಶಿ ಪಾರುಕ್‍ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಬಂಗಾರಿ ಮಂಜು, ಭಾಸ್ಕರ್, ಬಾಬು, ರಾಜೇಶ್, ಗುರುಸ್ವಾಮಿ, ಸುನಿಲ್‍ಕುಮಾರ್, ಆಜಿಲ್‍ಪಾಷ, ವಿಶ್ವ, ವಿಜಯ್‍ಪಾಲ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಶ್ರೀಕಾಂತ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಅಂಬ್ಲಿಕಲ್ ಮಂಜುನಾಥ, ಮುಂತಾದವರು ಇದ್ದರು.