ಕೋಲಾರ,ಅ.21: ಗ್ರಾಮವಿಕಾಸ ಮತ್ತು ರೆಸ್ಟ್ಲೆಸ್ ಡೆವೆಲಪ್ಮೆಂಟ್, ಕೋಲಾರ ಲೇಕ್ಸೈಡ್ ರೋಟರಿ ಕ್ಲಬ್ ಮತ್ತು ಗ್ರೀನ್ ವಾರಿಯರ್ಸ್ ತಂಡದ ಸಹಯೋಗದಲ್ಲಿ ಮುಳಬಾಗಿಲು ಪಟ್ಟಣದಲ್ಲಿರುವ ವಾಸವಿ ಕಲ್ಯಾಣಮಂಟಪದಲ್ಲಿ “ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆ” ಗಾಗಿ ಅಭಿಯಾನದ ಮೂಲಕ “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಎಂಬ ಸಂದೇಶವನ್ನು ಸಾರುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ ಇಡೀ ವಿಶ್ವವನ್ನೆ ನಿದ್ದೆ ಇಲ್ಲದೇ ಮಾಡುತ್ತದೆ. ಪ್ರಪಂಚದಲ್ಲಿ ಎಲ್ಲಾ ರಾಷ್ಟ್ರಗಳು ಹವಾಮಾನ ಬದಲಾವಣೆಗೆ ತುತ್ತಾಗಿವೆ. 1.5 ಡಿಗ್ರೀಸ್ ತಾಪಮಾನ ಹೆಚ್ಚಾದರೆ ಪ್ರಪಂಚವೇ ಉಳಿಯುವುದಿಲ್ಲ. ಈಗ ನಾವೆಲ್ಲರೂ ಸೇರಿ 1.5 ಡಿಗ್ರೀಸ್ ಒಳಗೆ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದಕ್ಕೆ ಪ್ರತಿ ಒಬ್ಬ ವ್ಯಕ್ತಿ ಕೆಲಸ ಮಾಡಬೇಕಾಗಿದೆ. ಹವಾಮಾನ ಬದಲಾವಣೆಗೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದು ಪ್ಲಾಸ್ಟಿಕ್ ಎಂಬುದನ್ನು ಮನಗಾಣಬೇಕಿದೆ.
ಮದುವೆ, ಮುಂಜಿ, ನಿಶ್ಚಿತಾರ್ಥ ಇಂತಹ ಸಾಮಾಜಿಕ ಸಂಭ್ರಮಗಳಲ್ಲಿ ಅಧಿಕೃತ ಸಭೆ ಸಮಾರಂಭಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಾಟಲ್ಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಪ್ಲಾಸ್ಟಿಕ್ ವಸ್ತುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ.
ಇದನ್ನು ಮನಗಂಡ ಗ್ರಾಮವಿಕಾಸ ಮತ್ತು ರೆಸ್ಟ್ಲೆಸ್ ಡೆವೆಲಪ್ಮೆಂಟ್, ಕೋಲಾರ ಲೇಕ್ಸೈಡ್ ಮತ್ತು ವೈ.ಐ.ಡಿ.ಎಸ್ ಸಂಸ್ಥೆ ಕೋಲಾರ ಮೂಲಕ ಸಂಘಟಿಸಿದ ಹಸಿರು ಯೋಧರ ತಂಡ ಯಾವುದೇ ಮದುವೆ ಸೇರಿದಂತೆ ಇನ್ನಿತರೆ ಸಮಾರಭಗಳಲ್ಲಿ ಸ್ಟೀಲ್ ಲೋಟಗಳನ್ನು ವಿತರಿಸುವ ಮೂಲಕ “ಪ್ಲಾಸ್ಟಿಕ್ ವಿರೋಧಿಸುವ ಕಾರ್ಯ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ.
ಮದುವೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬದಲು ಸ್ಟೀಲ್ ಲೋಟಗಳನ್ನು ತಂದು ನೀರು ತುಂಬಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ನಾವು ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಮಳೆನೀರು ಹರಿಯುವಾಗ ಕೆರೆ-ಕುಂಟೆ ಬಾವಿ ಹಳ್ಳ-ಕೊಳೆಗಳನ್ನು ತುಂಬಿಕೊಂಡು ಜಲ ಪ್ರವಾಹಕ್ಕೆ ಕಾರಣವಾಗುತ್ತಿದೆ. ಮಾತ್ರವಲ್ಲದೆ ನದಿ ಸರೋವರಗಳ ಮೂಲಕ ಇಡೀ ಸಮುದ್ರವನ್ನೇ ಪ್ಲಾಸ್ಟಿಕ್ ಆವರಿಸಿಕೊಳ್ಳುತ್ತಿದೆ. ಇದರಿಂದ ಶೇ. 65 ರಷ್ಟು ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತಿರುವ ಸಮುದ್ರವನ್ನೇ ನುಂಗುತ್ತಾ ಜನರನ್ನು ಉಸಿರುಗಟ್ಟಿಸಿ ಪ್ರಾಣ ತೆಗೆಯುತ್ತಿದೆ. ಈ ಪ್ಲಾಸ್ಟಿಕ್ ಇಡೀ ಜೀವ ಸಂಕುಲವನ್ನೇ ವಿನಾಶಕ್ಕೆ ತಳ್ಳುತ್ತಿದೆ. ಅನ್ನ ಆಹಾರ ಪೂರೈಸುವ ಅಕ್ಷಯ ಪಾತ್ರೆ ಭೂ ತಾಯಿಯನ್ನು ಆವರಿಸಿ, ಮಣ್ಣಿಗೆ ವಿಷ ಉಣಿಸಿ ಮಾನವ ಜೀವನವನ್ನು ಅಪಾಯಕ್ಕೆ ತಳ್ಳುತ್ತಿದೆ.
“ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಎಂಬ ಸಂದೇಶವನ್ನು ಸಾರುತ್ತಾ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿತ್ತಿರುವುದಾಗಿ ತಿಳಿಸಿದರು.
ಗ್ರಾಮ ವಿಕಾಸದ ಮುಖ್ಯಸ್ಥ ಎಂ.ವಿ.ಎನ್.ರಾವ್, ಚೌಡಪ್ಪ, ಹೂಹಳ್ಳಿ ನಾಗರಾಜ್, ಭವ್ಯ, ಕೋಲಾರ ಲೇಕ್ಸೈಡ್ ರೋಟರಿ ಕ್ಲಬ್ ಮತ್ತು ಗ್ರೀನ್ ವಾರಿಯರ್ಸ್ನ ಸದಸ್ಯರು ಉಪಸ್ಥಿತರಿದ್ದರು.