JANANUDI.COM NETWORK
ಜೆದ್ದಾ, ಸರಿಸುಮಾರು ಕಳೆದ ಒಂದು ವರ್ಷದಿಂದ ನಿಷೇಧಿಸಲ್ಪಟ್ಟ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ರಸ್ತೆ, ಜಲ ಹಾಗೂ ವಿಮಾನ ಪ್ರಯಾಣವು ಮೇ 17ರ ಮುಂಜಾನೆ 1 ಗಂಟೆಯಿಂದ ಸಹಜ ಸ್ಥಿತಿಗೆ ಬರಲಿದ್ದು, ಅಂದು ಮುಚ್ಚಲ್ಪಟ್ಟ ತನ್ನೆಲ್ಲಾ ಅಂತರರಾಷ್ರೀಯ ಗಡಿಗಳನ್ನು ಸೌದಿ ಅರೇಬಿಯಾವು ತೆರವುಗೊಳಿಸಲಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ತಿಳಿಸಿದೆ.
ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸೌದಿ ಅರೇಬಿಯಾವು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಯಾಣಿಕರು ಎರಡು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿರಬೇಕು ಅಥವಾ ಒಂದು ಡೋಸ್ ಲಸಿಕೆ ಪಡೆದು 14 ದಿವಸಗಳು ಪೂರ್ಣಗೊಂಡಿರಬೇಕು, ಪ್ರಯಾಣಿಕನು ಕೊವಿಡ್ ಸೋಂಕಿಗೆ ಒಳಗಾಗಿದ್ದರೆ ಗುಣಮುಖನಾಗಿ 6 ತಿಂಗಳು ಪೂರ್ಣಗೊಂಡಿರಬೇಕು ಹಾಗೂ ಇವುಗಳನ್ನು ಅಪ್ಡೇಟ್ ಮಾಡಿರಬೇಕು. 18 ವರ್ಷ ವಯಸ್ಸಿನೊಳಗಿನವರು ಪ್ರಯಾಣಿಸುವುದಾದರೆ ಸರಕಾರದ ಆರೋಗ್ಯ ವಿಮೆಯನ್ನು ಪಡೆದಿರಬೇಕು ಎಂದು ತಿಳಿಸಿದೆ.
ಸೌದಿ ಪ್ರವೇಶಿದವರು ಏಳು ದಿನಗಳ ಕಾಲ ಹೋಂ ಕ್ವಾರೆಂಟೈನ್ ಗೆ ಒಳಗಾಗಬೇಕು ಆ ನಂತರ ಕೊವಿಡ್ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂಬ ನಿಯಮಗಳನ್ನು ಸೌದಿ ಆಂತರಿಕ ಸಚಿವಾಯವು ಪ್ರಕಟಿಸಿದೆ.
ಆದರೆ ಭಾರತ ಸೇರಿದಂತೆ ಇತರ 20 ರಾಷ್ಚ್ರಗಳಿಂದ ಪ್ರಯಾಣಿಸುವ ಪ್ರಯಾಣಿಕರ ಕುರಿತು ಅನಿಶ್ಚಿತತೆ ಇನ್ನೂ ಮುಂದುವರಿದಿದ್ದು, ಈ ರಾಷ್ಟ್ರಗಳ ಪ್ರಯಾಣ ನಿಷೇಧದ ತೆರೆವಿನ ಕುರಿತು ಸಚಿವಾಲಯವು ಮುಂದೆ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.