ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಪ್ರಕೃತಿ ವಿಕೋಪದಿಂದಾಗಿರುವ ಬೆಳೆನಷ್ಟಕ್ಕೆ ಸೂಕ್ತಪರಿಹಾರ,ಮನೆ ಕಳೆದುಕೊಂಡವರಿಗೆ ಮನೆ, ಹಾಳಾದ ರಸ್ತೆಗಳ ದುರಸ್ಥಿಮಾಡಿಸಿ, ರಾಸುಗಳಿಗೆ ತಗುಲಿರುವ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿ ಎಂದು ವಿಧಾನಸಭೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಸರ್ಕಾರವನ್ನು ಆಗ್ರಹಿಸಿದರು.
ಸದನದಲ್ಲಿ ಗಮನ ಸೆಳೆದು ಮಾತನಾಡಿದ ಅವರು, ನಮ್ಮದು ಗಡಿ ತಾಲ್ಲೂಕಾಗಿದ್ದು, ಕಳೆದ 20 ವರ್ಷಗಳ ನಂತರ ಕೆರೆಗಳು ತುಂಬಿರುವುದು ಸಂತಸ ತಂದಿದ್ದರೂ, ಈ ಮಳೆಯಿಂದಾಗಿರುವ ಹಾನಿಯಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ, ಮನೆಯಲ್ಲಿನ ಒಡವೆ ಅಡವಿಟ್ಟು ಹಾಕಿದ ಬೆಳೆ ಕೈಗೆ ಬಾರದೆ ಅವರ ಬದುಕು ಸಂಕಷ್ಟದಲ್ಲಿದೆ ಎಂದು ತಿಳಿಸಿದರು.
ರಾಗಿ,ಕಡಲೇ,ತರಕಾರಿ ಬೆಳೆಗಳು ನಾಶವಾಗಿದೆ ಇದಕ್ಕೆ ಸೂಕ್ತ ಪರಿಹಾರ ಘೋಷಿಸಿ ಎಂದ ಅವರು, ಸರ್ಕಾರ ಘೋಷಿಸಿರುವ ಪರಿಹಾರ ಪಡೆಯಲು ರೈತರು ಅಲೆದಾಡಿ ಸುಸ್ತಾಗುತ್ತಿದ್ದಾರೆ, ಇದು ಸರಿಯಲ್ಲಿ ರೈತರ ಮನೆಬಾಗಿಲಿಗೆ ಪರಿಹಾರ ಗಲುಪಿಸುವ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಪರಿಹಾರಕ್ಕಾಗಿ ನಡೆಸುತ್ತಿರುವ ಸಮೀಕ್ಷೆಯಲ್ಲಿ ರೈತರನ್ನು ಅಧಿಕಾರಿಗಳು ದಿಕ್ಕುತಪ್ಪಿಸುತ್ತಿದ್ದಾರೆ,
ಪರಿಹಾರ ನೀಡಲು ದಾಖಲೆಗಳಿಗೆ ಅಲೆದಾಟ ಸಾಕಾಗಿದೆ, ಮನೆ ಕಳೆದುಕೊಂಡು ದಾಖಲೆಗಳಿಲ್ಲದ ಜನ ಏನು ಮಾಡಬೇಕು, ಸಂಕಷ್ಟಕ್ಕೀಡಾದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪರಿಹಾರ ತಲುಪಿಸುವುದು ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು.
ಮನೆಗಳಿಗೆ ಪರಿಹಾರ ನೀಡುವಾಗ ಸೂಕ್ತ ಮಾನದಂಡ ಹಾಕಿ, ಫಲಾನುಭವಿಗಳಿಗೆ ವಿನಾಕಾರಣ ತೊಂದರೆ ನೀಡಬೇಡಿ, ಈಗಾಗಲೇ ನೊಂದಿರುವ ಅವರಿಗೆ ಮತ್ತಷ್ಟು ನೋವು ನೀಡದಿರಿ ಎಂದು ಮನವಿ ಮಾಡಿದರು.
ಶಿಥಿಲಗೊಂಡ ಶಾಲೆ
ಓದಿಗೂ ಕಂಟಕ
ಕೋವಿಡ್‍ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಬಂದ್ ಆಗಿತ್ತು, ಈಗ ಆರಂಭಗೊಂಡಿವೆ ಆದರೆ ಅನೇಕ ಶಾಲಾ ಕಟ್ಟಡಗಳು ಹಾಳಾಗಿದ್ದು, ಭಯ ಆವರಿಸಿದೆ, ಕೂಡಲೇ ಆದ್ಯತೆಯಡಿ ಶಾಲೆಗಳ ದುರಸ್ಥಿಗೆ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ತಾಲ್ಲೂಕಿನಲ್ಲಿ ಮಳೆಯಿಂದ ಶೇ.80 ರಷ್ಟು ರಸ್ತೆಗಳು ಹಾಳಾಗಿವೆ, ಮೊದಲು ಆದ್ಯತೆ ಮೇಲೆ ಸಂಪೂರ್ಣ ಹಾಳಾಗಿರುವ ರಸ್ತೆಗಳ ದುರಸ್ಥಿಗೆ ಕ್ರಮವಹಿಸಿ, ಇಲ್ಲವಾದಲ್ಲಿ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಇದೆ ಎಂದರು.
ಕಾಲುಬಾಯಿ ಜ್ವರ
ಲಸಿಕೆ ಹಾಕಿಸಿ
ಅತಿವೃಷ್ಟಿ ಸಂಕಷ್ಟದ ನಡುವೆಯೂ ರೈತರು ಕುರಿ,ಹಸು ಸಾಕಾಣೆಯಿಂದು ಉಸಿರಾಡುತ್ತಿದ್ದಾರೆ, ಆದರೆ ಈಗ ಅವುಗಳಿಗೂ ಕಾಲುಬಾಯಿ ಜ್ವರ ಉಲ್ಬಣಿಸುತ್ತಿದೆ, ಇದಕ್ಕೆ ಲಸಿಕೆ ಹಾಕಿಸುವ ಕಾರ್ಯ ಮಂದಗತಿಯಲ್ಲಿದ್ದು, ಕಟ್ಟಕಡೆಯ ಹಳ್ಳಿಗೂ ಹೋಗಿ ಲಸಿಕೆ ಹಾಕಲು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.
ಒಂದು ಹಸು ಇಲ್ಲವೇ 10 ಕುರಿಗಳು ರೈತನ ಜೀವನಾಧಾರವಾಗಿವೆ, ಇಂತಹ ಸಂದರ್ಭದಲ್ಲಿ 60 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹಸು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದರೆ ರೈತನ ಗತಿಯೇನು ಎಂದು ಪ್ರಶ್ನಿಸಿ ಲಸಿಕಾ ಅಭಿಯಾನ ಚುರುಕುಗೊಳಿಸಿ ಎಂದು ಆಗ್ರಹಿಸಿದರು.