ಸಾಂಪ್ರದಾಯಿಕ ಜನಪದ ಹಾಡುಗಳ ಸಂಗ್ರಾಹಕರಾದ, ಸಾಹಿತಿ, ಹಿರಿಯ ಕಲಾವಿದೆ ಹಾಗೂ ಸಂಘಟಕರಾದ ಕುಂದಾಪುರದ ಹಾಲಾಡಿ ಲಕ್ಷ್ಮೀದೇವಿ ಕಾಮತರನ್ನು ಹುಬ್ಬಳ್ಳಿಯ “ಸರಸ್ವತಿ ಪ್ರಭಾ” ಕೊಂಕಣಿ ಮಾಸಿಕ ವತಿಯಿಂದ ಕುಂದಾಪುರದಲ್ಲಿ ನಡೆದ ಸಮಾರಂಭದಲ್ಲಿ “ಸರಸ್ವತಿ ಪ್ರಭಾ ಪುರಸ್ಕಾರ” ನೀಡಿ ಸಮ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಪಂಡಿತ್ ಕುಮಟಾ, ಅಪ್ಪುರಾಯ ಪೈ ಹುಬ್ಬಳ್ಳಿ ಆಗಮಿಸಿದ್ದರು.
“ಸರಸ್ವತಿ ಪ್ರಭಾ” ಸಂಪಾದಕ ಆರ್ಗೋಡು ಸುರೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, “36 ವರ್ಷಗಳಿಂದ ಪ್ರಕಟವಾಗುತ್ತಿರುವ “ಸರಸ್ವತಿ ಪ್ರಭಾ” ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಸಾರ ಹೊಂದಿದ್ದು, ಕುಂದಾಪುರದಲ್ಲೂ ಓದುಗರಿದ್ದಾರೆ. ಪ್ರತಿ ವರ್ಷ ಹಿರಿಯ ಸಾಧಕರಿಗೆ “ಸರಸ್ವತಿ ಪ್ರಭಾ” ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ವರ್ಷ ಕೊಂಕಣಿ ಕನ್ನಡ ಸಾಹಿತ್ಯ, ಕಲೆಯಲ್ಲಿ 5 ದಶಕಗಳಿಂದ ಅಪೂರ್ವ ಸಾಧನೆಗೈದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಅವರಿಗೆ ನೀಡುತ್ತಿದ್ದೇವೆ. ಅವರ ಸಾಧನೆ ಅಭಿನಂದನೀಯ” ಎಂದರು.
ಪುರಸ್ಕಾರ ಸ್ವೀಕರಿಸಿದ ಲಕ್ಷ್ಮೀದೇವಿ ಕಾಮತ್ ಮಾತನಾಡಿ, “ಜನಪದ ಕಲೆಗಳ ಬಗ್ಗೆ ಆಸಕ್ತಿ ಬಾಲ್ಯದಿಂದಲೇ ಬಂದದ್ದು. ಮೈಸೂರಿನಿಂದ ಕುಂದಾಪುರಕ್ಕೆ ಬಂದ ಮೇಲೆ ನಮ್ಮ ಹಲವು ಗ್ರಾಮೀಣ ಪ್ರದೇಶದ ಗ್ರಾಹಕರಲ್ಲಿ ಇರುವ ಪ್ರತಿಭೆಯನ್ನು ಕಂಡು ಕೊಂಕಣಿ, ಕನ್ನಡ ಜನಪದ ಸಾಹಿತ್ಯ ಸಂಗ್ರಹ ಮಾಡಲು ಹಳ್ಳಿಗಳಿಗೆ ತಿರುಗಾಡಿದೆ. ಅದನ್ನೆಲ್ಲ ಸಂಗ್ರಹಿಸಿ “ಜೀವನ ಚಕ್ರ” ಎಂಬ ಕೃತಿ ರಚಿಸಿದೆ. ಕೊಂಕಣಿ ಭಾಷೆ, ಕಲೆ, ಅಭಿವೃದ್ಧಿ ಬಗ್ಗೆ ಸೇವೆ ಸಲ್ಲಿಸಲು ನನಗೆ ತುಂಬಾ ಮಂದಿ ಸಹಾಯ ಮಾಡಿದ್ದಾರೆ. ಈ ಆಸಕ್ತಿ ನಿರಂತರವಾಗಿ ಉಳಿಸಿಕೊಳ್ಳಲು ನನ್ನ ಪತಿ ಹಾಲಾಡಿ ವಾಸುದೇವ ಕಾಮತ್ ಹಾಗೂ ಹಿತೈಷಿಗಳು ಕಾರಣರಾಗಿದ್ದಾರೆ. ನಮ್ಮ ಸಂಸ್ಕøತಿ ಉಳಿಸುವುದೇ ನನ್ನ ಮುಖ್ಯ ಧ್ಯೇಯ” ಎಂದರು.
ಪ್ರದೀಪ್ ಕುಮಾರ್ ಪಂಡಿತ ಅಭಿನಂದನಾ ಪತ್ರ ವಾಚನ ಮಾಡಿದರು.
“ಸರಸ್ವತಿ ಪ್ರಭಾ” ಕೊಂಕಣಿ ಮಾಸಿಕದ ಸಂಘಟನಾ ಪ್ರಮುಖರಾಗಿ 30 ವರ್ಷ ಸೇವೆ ಸಲ್ಲಿಸಿದ ಅಪ್ಪುರಾಯ ಪೈಯವರನ್ನು ಗೌರವಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಲತಾ ಭಟ್ ಅವರನ್ನು ಗೌರವಿಸಲಾಯಿತು.ಯಕ್ಷಗಾನ ತರಬೇತುದಾರ, ಮುಖ್ಯ ಶಿಕ್ಷಕ, ವಿಠಲ ಕಾಮತ್ ಉಪ್ಪಿನಕುದ್ರು, ವ್ಯವಹಾರೋದ್ಯಮಿ ಮಾಧವ ಶ್ಯಾನುಭಾಗ ವಡೇರಹೋಬಳಿ ಅಭಿನಂದನಾ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಯು. ಎಸ್. ಶೆಣೈ ಮಾತನಾಡಿ, “ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಸರಸ್ವತಿ ಸನ್ಮಾನ ಪುರಸ್ಕಾರಕ್ಕೆ ಅರ್ಹ ಸಾಧಕರಾಗಿದ್ದಾರೆ. ಅವರಂತೆ ಜೀವನದಲ್ಲಿ ಭಾಷೆ, ಸಂಸ್ಕøತಿ ಸಾಹಿತ್ಯಕ್ಕಾಗಿ ಜನಪದ ಸಂಪ್ರದಾಯದ ಉಳಿವಿಗಾಗಿ ಶ್ರಮ ಪಟ್ಟವರು ವಿರಳ. ಅವರು ಕಿರಿಯರಿಗೆ ಪ್ರೇರಣೆ ನೀಡುವ ಅನುಕರಣೀಯ ನಾಯಕತ್ವ ಹೊಂದಿದ್ದಾರೆ. ಅವರ ಕ್ರಿಯಾಶೀಲತೆ ಅಭಿನಂದನೀಯ, ಕುಂದಾಪುರಕ್ಕೆ ಅವರ ಕೊಡುಗೆ ದೊಡ್ಡದು” ಎಂದರು.
ಹಿರಿಯ ಶಿಕ್ಷಕ ದಿನೇಶ ಪ್ರಭು ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ರಾಮನಾಥ ಪ್ರಾರ್ಥಿಸಿದರು. ಶ್ವೇತಾ ರವೀಂದ್ರ ನಾಯಕ್ ಸ್ವಾಗತಿಸಿ, ಶ್ರೀಮತಿ ವಿಜಯಾ ಸದಾಶಿವ ಕಾಮತ್ ವಂದಿಸಿದರು.