ಶ್ರೀನಿವಾಸಪುರ: ಸಂಕ್ರಾಂತಿ ಸಮೃದ್ಧಿಯ ಸಂಕೇತ. ಕಾಳು ಕಣಜ ಸೇರುವ ಕಾಲ. ಸಂಕ್ರಾಂತಿ ರೈತರಿಗೆ ದೊಡ್ಡ ಹಬ್ಬ. ಅದು ಕೃಷಿ ಉತ್ಪನ್ನ ಕೈಗೆ ಬರಲು ಕಾರಣವಾದ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭವಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಳ್ಳಿ ಸೊಗಡು ಬಿಟ್ಟುಕೊಡಬಾರದು. ಅರ್ಥಪೂರ್ಣ ಸಾಂಪ್ರದಾಯಿಕ ಆಚರಣೆಗಳಿಗೆ ಬೆನ್ನುತೋರಿಸಬಾರದು ಎಂದು ಹೇಳಿದರು.
ಹಿಂದೆ ಸಂಕ್ರಾಂತಿ ಗ್ರಾಮೀಣ ಪ್ರದೇಶದಲ್ಲಿ ಸರಳ ಆಚರಣೆಯಾಗಿತ್ತು. ಜನರು ತಮ್ಮ ದಿನ ನಿತ್ಯದ ಕೆಲಸಗಳ ನಡುವೆ ದುಡಿದ ಎತ್ತುಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬ ಆಚರಿಸುತ್ತಿದ್ದರು. ಹಳ್ಳಿಗಾಡಿನಲ್ಲಿ ಇಂದಿಗೂ ಸಂಕ್ರಾಂತಿ ಹಬ್ಬವನ್ನು ಎತ್ತುಗಳ ಹಬ್ಬ ಎಂದು ಕರೆಯುವುದು ರೂಢಿ. ರೈತರು ತಮಗೆ ಅನುಕೂಲವಾದ ದಿನದಂದು ಹಬ್ಬ ಆಚರಿಸುತ್ತಾರೆ. ಗೋಪೂಜೆ ಮತ್ತು ಗೋವುಗಳ ಮೆರವಣಿಗೆಗೆ ಆದ್ಯತೆ ನೀಡುತ್ತಾರೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಎತ್ತುಗಳ ಸಂಖ್ಯೆ ಕುಸಿದಿದ್ದು, ಸಂಕ್ರಾಂತಿ ಸಂಭ್ರಮ ಕಳೆಗಟ್ಟುತ್ತಿಲ್ಲ ಎಂದು ಹೇಳಿದರು.
ಭೈರವೇಶ್ವರ ವಿದ್ಯಾನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಹಳ್ಳಿಗಾಡಿನಲ್ಲಿ ಸಂಕ್ರಾಂತಿ ಸೊಗಡು ಕಣ್ಮರೆಯಾಗುತ್ತಿದೆ. ಆದ್ದರಿಂದ ಸಂಕ್ರಾಂತಿ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ದವಸ ಧಾನ್ಯಗಳು ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಹಬ್ಬ ಹರಿದಿನಗಳು ಹಾಗೂ ಜಾನಪದ ಕಲೆಗಳು ಗ್ರಾಮೀಣ ಜನರನ್ನು ಒಗ್ಗೂಡಿಸುವ ಸಾಧನವಾಗಿದ್ದವು. ಮುಖ್ಯವಾಗಿ ಸಂಕ್ರಾಂತಿ ಹಬ್ಬದಲ್ಲಿ ಗ್ರಾಮೀಣ ಸಮಾಜದ ಎಲ್ಲ ವರ್ಗದ ಜನರೂ ಒಂದೆಡೆ ಸೇರಿ ವಿಶೇಷ ಆಸಕ್ತಿವಹಿಸಿ ಹಬ್ಬ ಆಚರಿಸುತ್ತಿದ್ದರು. ವಿದ್ಯಾರ್ಥಿಗಳು ಹಿರಿಯರ ಹಾದಿಯಲ್ಲಿ ನಡೆಯಬೇಕು. ಭೇದ ಭಾವ ಮಾಡದೆ ಒಟ್ಟಾಗಿ ಹಬ್ಬ ಆರಣೆ ಮಾಡಬೇಕು. ಮಾನವೀಯ ನೆಲೆಯಲ್ಲಿ ಬದುಕಬೇಕು ಎಂದು ಹೇಳಿದರು.
ಪ್ರಗತಿಪರ ರೈತ ಹರಿನಾಥಬಾಬು ಕೃಷಿ ಪರಿಕರಗಳ ಪರಿಚಯ ಮಾಡಿಕೊಟ್ಟು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹೊಲ ಗದ್ದೆಗೆ ಹೋಗಬೇಕು. ಕೃಷಿ ಅನುಭವ ಪಡೆಯಬೇಕು. ಕುಲವೃತ್ತಿಗೆ ಬೆನ್ನುತೋರಿಸುವ ಮನೋಭಾವ ಬಿಡಬೇಕು. ಭೂಮಿಯನ್ನು ನಂಬಿ ದುಡಿದರೆ ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ. ಆದರೆ ಪೋಷಕರು ಮಕ್ಕಳನ್ನು ಓದುವ ಯಂತ್ರಗಳನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾವರಣದಲ್ಲಿ ತೃಣಧಾನ್ಯಗಳು ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿನಿಯರಿಂದ ರಂಗೋಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಶೃಂಗರಿಸಿದ ಎತ್ತುಗಳ ಪ್ರದರ್ಶನ, ದನದ ಕೊಟ್ಟಿಗೆ ದರ್ಶನ ಏರ್ಪಡಸಲಾಗಿತ್ತು. ಅವರೆಕಾಯಿ, ನೆಲಗಡಲೆ ಬೇಯಿಸಿ ಮಕ್ಕಳಿಗೆ ವಿತರಿಸಲಾಯಿತು. ಪೊಂಗಲ್ ವಿತರಿಸಲಾಯಿತು. ಎಳ್ಳು ಬೆಲ್ಲ ಹಂಚಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ವೆಂಕಟರವಣರೆಡ್ಡಿ, ಪ್ರಾಂಶುಪಾಲ ಎ.ಗಂಗಾಧರಗೌಡ ಮತ್ತು ಶಿಕ್ಷಕರು ಇದ್ದರು.