ಕೋಲಾರ:- ಕಲಿಕೆಯಲ್ಲಿ ಶ್ರದ್ದೆ,ಏಕಾಗ್ರತೆ ಮೂಡಲು ಉತ್ತಮ ಆರೋಗ್ಯ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರು, ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಮ್ಮದಾಗಿದೆ ಎಂದು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲೆಯ ಬಂಗಾರಪೇಟೆ, ಮಾಲೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಸ್ಯಾಮ್ಸಂಗ್ ಇಂಡಿಯ ಮತ್ತು ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ವಾಟರ್ಫಿಲ್ಟರ್ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಕಲಿಕೆಗೆ ಶ್ರದ್ಧೆ,ಛಲ, ನಿರ್ಧಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಖುಷಿಯಿಂದ ಸಾಧನೆಯತ್ತ ಮುನ್ನುಗ್ಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ನಿಮ್ಮ ತಂದೆತಾಯಿಯ ಆಶಯ ನಿಜವಾಗಿಸಿ, ನಿಮ್ಮ ಶೈಕ್ಷಣಿಕ ಅಭಿವೃದ್ದಿಗಾಗಿ ಶಿಕ್ಷಕ ಗೆಳೆಯರ ಬಳಗ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ, ವಾಟರ್ಫಿಲ್ಟರ್, ಕಟ್ಟಡಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಒದಗಿಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಪ್ರತಿ ವಿದ್ಯಾರ್ಥಿಯಲ್ಲೂ ಅಗಾಧವಾದ ಶಕ್ತಿ ಇದೆ, ಅದುನ್ನು ಹೊರತರುವ ಕೆಲಸವಾಗಬೇಕು, ನೀವು ಸಾಧನೆಯ ಛಲದೊಂದಿಗೆ ಮುನ್ನುಗ್ಗಿದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಜ್ಞಾನ,ಶೈಕ್ಷಣಿಕ ಸಾಧನೆ ಇದ್ದರೆ ಹಣ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದರು.
ಬಂಗಾರಪೇಟೆ ಬಿಇಒ ಗುರುಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿ, ಸರ್ಕಾರಿ ಶಾಲೆ ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ಈ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು ಎಂದರು.
ಮಕ್ಕಲಾದ ನೀವು ದೊಡ್ಡ ಕನಸು ಕಾಣಿ, ಆ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ,ಛಲದಿಂದ ಓದಿ ಎಂದುಕಿವಿಮಾತು ಹೇಳಿ, ನಾವು ನೀಡುತ್ತಿರುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗಳನ್ನು ಖಾಸಗಿ ಪೈಪೋಟಿಗೆ ಎದುರಾಗಿ ಸದೃಢಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿರುವ ಶಿಕ್ಷಕ ಗೆಳೆಯರ ಬಳಗ ನೀವು ನೀಡಿರುವ ಸೌಲಭ್ಯಗಳನ್ನು ಶಾಲಾ ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಸರ್ಕಾರಿ ಶಾಲೆಗಳಿಗೆ ನೀಡಿರುವ ಈ ಸೌಲಭ್ಯ ಸದುಪಯೋಗವಾಗಲಿ, ಮಕ್ಕಳಿಗೆ ಶುದ್ದ ಕುಡಿಯುವ ಈರು ಸಿಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಬಂಗಾರಪೇಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ ಹಾಗೂ ಶಿಕ್ಷಕ ಶ್ರೀನಿವಾಸ್ ಹಾಜರಿದ್ದರು.