ಶಾಸಕರ ಭವನದಲ್ಲೇ ಲಂಚ ಪಡೆದು ಶಿಕ್ಷೆಗೊಳಗಾದ ಸಂಪಂಗಿ ಅವರಿಗೆ ಡಿಸಿಸಿ ಬ್ಯಾಂಕನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ರಾಜ್ಯದ ಶಕ್ತಿಸೌಧ ಹಾಗೂ ಜವರ ದೇವಾಲಯದಂತಿರುವ ವಿಧಾನಸೌಧ ಪಕ್ಕದ ಶಾಸಕರ ಭವನದಲ್ಲೇ ಲಂಚ ಪಡೆದು ಸಿಕ್ಕಿಹಾಕಿಕೊಂಡು ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸಿರುವ ಕಳಂಕಿತ ಮಾಜಿ ಶಾಸಕ ಸಂಪಂಗಿ ಅವರಿಗೆ ಡಿಸಿಸಿ ಬ್ಯಾಂಕ್‌ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು ನೀಡಿದರು . ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಕುರಗಲ್ ಗ್ರಾಮದಲ್ಲಿ ನಡೆದ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ಸಭೆ ಹಾಗೂ ಜನಸೇವಾ ಕೇಂದ್ರದ ಯೋಜನೆಯಡಿ ನಿರ್ಮಿತವಾದ ಗೋದಾಮು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು . ಡಿಸಿಸಿ ಬ್ಯಾಂಕ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಪಗಿ ಅವರಿಗೆ ಟಾಂಗ್ ನೀಡಿದ ಅವರು , ನೀವೇ ಪರಮ ಭ್ರಷ್ಟರು , ಇನ್ನೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು . ಜನರಿಂದ ಆಯ್ಕೆಯಾಗಿ ಲಂಚ ಪಡೆದು ಲೋಕಾಯುಕ್ತಕ್ಕೆ ಸಿಕ್ಕಿಹಾಕಿಕೊಂಡು ಜಿಲ್ಲೆಯ ಗೌರವವನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿದ್ದೀರಿ , ಆರೋಪ ಸಾಬೀತಾಗಿ , ನ್ಯಾಯಾಲಯ ಶಿಕ್ಷೆಯನ್ನೂ ವಿಧಿಸಿದ್ದು , ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡಿರುವ ಸಂಪಂಗಿಯವರೇ .. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲದೇ ಹತಾಶರಾಗಿ ಮಾತನಾಡುತ್ತಿದ್ದೀರಿ ಎಂದು ಕಿಡಿಕಾರಿದರು . ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆಗಿದೆ ನಿಮ್ಮ ಪರಿಸ್ಥಿತಿ , ಮೊದಲು ನೀವು ಕಳಂಕರಹಿತರಾಗಿ ಹೊರಬನ್ನಿ . ಆನಂತರ ಬ್ಯಾಂಕ್ ಬಗ್ಗೆ ಮಾತನಾಡುವಿರಂತೆ ಎಂದು ಲೇವಡಿ ಮಾಡಿದರು .

ತಪ್ಪಿದ್ದರ ಸಾಬೀತು ಮಾಡಿ – ಸವಾಲು


ಸಂಪಂಗಿ , ಬ್ಯಾಂಕ್‌ ಮಾಜಿ ನಿರ್ದೇಶಕ ಹನುಮೇಗೌಡರಂತಹ ಕಳಂಕಿತ ವ್ಯಕ್ತಿಗಳು ಮಾಡುವ ಟೀಕೆಗೆ ನಾನೂ ಮತ್ತು ನಮ್ಮ ಆಡಳಿತ ಮಂಡಳಿ ಹೆದರಲ್ಲ , ಡಿಸಿಸಿ ಬ್ಯಾಂಕಿನಲ್ಲಿ ತಪ್ಪಾಗಿದ್ದಾರೆ ಸಾಬೀತು ಮಾಡಲಿ , ಆ ಕ್ಷಣವೇ ನಾನು ಸಾರ್ವಜನಿಕ ಜೀವನದಿಂದ ಹೊರಗೆ ಹೋಗುವುದಾಗಿ ಸವಾಲು ಹಾಕಿದರು .
ನಿಮ್ಮ ರಾಜಕೀಯಕ್ಕಾಗಿ ಬ್ಯಾಂಕನ್ನು ಬಲಿಕೊಡುವ ಕೆಲಸ ಮಾಡಬೇಡಿ , ಕಾಯಂದಿರಿಗೆ ಸಾಲ ನೀಡಬಾರದು ಎರಬ ನಿಮ್ಮ ಸಿದ್ದಾಂತ ನಾನು ಒಪ್ಪೋದಿಲ್ಲ , ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ , ನಮಗೆ ತಾಯಂದಿರು , ಮಹಿಳೆಯರ ಶ್ರೀರಕ್ಷೆ ಇದೆ , ನಿಮ್ಮಂತಹವರಿಗೆ ಹೆದರಲ್ಲ ಎಂದರು . ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕನ್ನು ಸರಿಪಡಿಸಿದ್ದೇವೆ , ರೈತರಿಗೆ ಸಾಲ ನೀಡಲಾಗದೇ , ಇಟ್ಟ ಠೇವಣಿ ಹಣ ವಾಪಸ್ಸು ನೀಡಲಾಗದೇ ದುಸ್ಥಿತಿಯಲ್ಲಿದ್ದ ಬ್ಯಾಂಕನ್ನು ಅಭಿವೃದ್ಧಿಪಡಿಸಿ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡಿದ್ದೇವೆ ಎಂದರು . ಸಾಲ ನೀಡುವಾಗ ಎಂದೂ ಜಾತಿ , ಪಕ್ಷ , ಧರ್ಮ ನೋಡಿಲ್ಲ , ನಿಯಮಾನುಸಾರ ಸಂಘ ರಚಿಸಿಕೊಂಡು ಬ್ಯಾಂಕಿಗೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಿದ್ದೇವೆ , ಬ್ಯಾಂಕಿಂದ ಅನ್ಯಾಯವಾಗಿರುವುದು ನಿಜವೇ ಆಗಿದ್ದರೆ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಎಲ್ಲಾದರೂ ರೈತರಾಗಲಿ , ಕಾಯಂದಿರಾಗಲಿ ಬ್ಯಾಂಕ್‌ ವಿರುದ್ಧ ನೇರವಾಗಿ ಪ್ರತಿಭಟನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು . ಹಿಂದೆ ದಿವಾಳಿಯಾಗಿದ್ದಾಗ ಜಿಲ್ಲೆಯ ರೈತರು , ಮಹಿಳೆಯರು ಸಾಲ ಸಿಗದೇ ವಂಚಿತರಾಗಿದ್ದಾರೆ , ಸಾಲ ಮನ್ನಾ ಸೌಲಭ್ಯವೂ ಸಿಗಲಿಲ್ಲ , ನಮ್ಮ ಆಡಳಿತಮಂಡಳಿ ಬಂದ ನಂತರ ಸಾವಿರಾರು ಕೋಟಿ ಸಾಲ ನೀಡಿದ್ದೇವೆ , ೩೩೦ ಕೋಟಿ ರೂ ಸಾಲ ಮನ್ನಾ ಪ್ರಯೋಜನ ಅವಿಭಜಿತ ಜಿಲ್ಲೆಗೆ ರೈತರಿಗೆ ಸಿಕ್ಕಿದೆ ಎಂದರು . ಇಂತಹ ರೈತರ ಮಹಿಳೆಯರ ಜೀವನಾಡಿಯಾಗಿರುವ ಸಂಸ್ಥೆಯನ್ನು ರಾಜಕೀಯ ಲಾಭಕ್ಕಾಗಿ ಹಾಳು ಮಾಡಬೇಡಿ , ನಮ್ಮೊಂದಿಗೆ ಬನ್ನಿ ಸಂಸ್ಥೆ ಕಟ್ಟೋಣ , ನಮ್ಮಿಂದ ತಪ್ಪಾಗಿದ್ದಾರೆ ಸಾಬೀತು ಮಾಡಿ ತಲೆತಗ್ಗಿಸುತ್ತೇವೆ , ನಯಾಪೈಸೆ ದುರುಪಯೋಗವಾಗಲು ಬಿಟ್ಟಿಲ್ಲ ಎಂದರು . ಕಾರ್ಯ ಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್‌ , ನಾಗನಾಳ ಸೋಮಣ್ಣ , ಕೆ.ವಿ.ದಯಾನಂದ್ , ಯಲವಾರ ಸೊಣ್ಣೆಗೌಡ , ಸಹಕಾರಿ ಯೂನಿಯನ್ ನಿರ್ದೇಶಕ ವೆಂಕಟೇಶಪ್ಪ , ಕಡಗಟ್ಟೂರು ಎಸ್‌ಎಫ್‌ಸಿಎಸ್‌ ಉಪಾಧ್ಯಕ್ಷ ಡೇವಿಡ್ , ನಿರ್ದೇಶಕರಾದ ಕೆ.ಎಸ್.ಕೃಷ್ಣಪ್ಪ , ಬಿ.ಮುನಿರಾಜು , ಕೆ.ಎಂ.ವೆಂಕಟೇಶಪ್ಪ , ಡಿ.ರಾಜಣ್ಣ , ಬಿ.ವಿ.ರಾಮಾಂಜನೇಯ , ಎಂ.ಮಂಜುನಾಥ , ಅಮರೇಶ , ವಿಜಯಮ್ಮ , ಬೈರಮ್ಮಸಿ .ಸಿಇಒ ಎನ್.ಮುನೀಶ್ವರಪ್ಪ ಮುಖಂಡರಾದ ರಮೇಶ್ ಮತ್ತಿತರರಿದ್ದರು .