ಕೋಲಾರ:- ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಬೇಕು, ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನದ ಜತೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕಿವಿಮಾತು ಹೇಳಿದರು.
ಮಂಗಳವಾರ ನಗರದ ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ, ಬದುಕಿಗೆ ಪಠ್ಯ ಸಾಲದು ಜತೆಗೆ ಮಾರಾಟ ಕೌಶಲ್ಯಗಳನ್ನು ಬೆಳೆಸಿಕೊಂಡರೆ ನಿಮ್ಮ ಮುಂದಿನ ಬದುಕಿನಲ್ಲಿ ಸಹಕಾರಿಯಾಗಲಿದೆ ಎಂದರು.
ನಿಮ್ಮ ಜೀವನದ ಗುರಿ ಸಾಧನೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದ ಅವರು, ನಿಮ್ಮ ಸ್ವಾವಲಂಬಿ ಬದುಕಿಗೆ ಇಂತಹ ಕೌಶಲ್ಯಗಳು ಮೆಟ್ಟಿಲು ಇದ್ದಂತೆ ಎಂದು ತಿಳಿಸಿ, ವಿದ್ಯಾರ್ಥಿ ಸಮುದಾಯ ದುಶ್ಚಟಗಳಿಗೆ ಬಲಿಯಾಗದೇ ಸರಿದಾರಿಯಲ್ಲಿ ಸಾಗಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸಲು ಇಂತಹ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದ ಅವರು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು, ಶಿಕ್ಷಕರ ಜವಾಬ್ದಾರಿಯೂ ಹೆಚ್ಚಿನದು ಎಂದರು.
ಕಾಲೇಜು ಆವರಣದಲ್ಲಿ ತೆರೆದಿದ್ದ 22 ನಾನಾ ಬಗೆಯ ಚಾಟ್ಸ್ ಸೆಂಟರ್ ಗಳಲ್ಲಿ ಪಾನಿಪುರಿ ಮಸಾಲೆ ಪುರಿ ಇನ್ನಿತರ ಕುರುಕುಲು ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಸ್ನ್ಯಾಕ್ಸ್ ಪ್ರಿಯರನ್ನು ಸೆಳೆಯುವ ಮೂಲಕ ಮಾರಾಟದಲ್ಲಿ ವಿದ್ಯಾರ್ಥಿಗಳು ಬ್ಯುಸಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ಉದಯಕುಮಾರ್, ಶಿಕ್ಷಣ ಎಂದರೆ ಕೇವಲ ಓದು ಮಾತ್ರವಲ್ಲ, ಬದುಕಿನ ಎಲ್ಲಾ ಮಜಲುಗಳ ಅರಿವು ಅಗತ್ಯ, ಓದಿಗಿಂತ ಬದುಕು ರೂಪಿಸಿಕೊಳ್ಳುವುದು ಅಗತ್ಯ ಎಂದ ಅವರು, ಓದು ಜ್ಞಾನಾರ್ಜನೆಗೆ ಸಹಕಾರಿಯಾದರೆ ಕೌಶಲ್ಯ ಬದುಕಿಗೆ ಸಹಕಾರಿ ಎಂದರು.
ವಿದ್ಯಾರ್ಥಿಗಳಲ್ಲಿ ಮಾರಾಟ ಕೌಶಲ್ಯ ಮಾತ್ರವಲ್ಲ, ವಸ್ತು ಖರೀದಿಸುವ ಕಲೆಯೂ ಬೆಳೆಯಲು ಇಂತಹ ಮಾರಾಟ ಮೇಳಗಳು ಸಹಕಾರಿಯಾಗಿರುವುದರಿಂದಲೇ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದು ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ವಿ. ಕೃಷ್ಣಪ್ಪ, ಉಪಾಧ್ಯಕ್ಷ ಮಾರುತಿ ಸಿಂಗ್ರಿ, ಕಾರ್ಯದರ್ಶಿ ಜಿ.ಎ. ಕುಲಕರ್ಣಿ, ಪದವಿ ಕಾಲೇಜಿನ ಪ್ರಾಂಶುಪಾಲ ಪೆÇ್ರೀ. ಎಂ. ಕೃಷ್ಣಪ್ಪ, ಉಪ ಪ್ರಾಂಶುಪಾಲ ಬದ್ರಿನಾಥ್, ಉಪನ್ಯಾಸಕ ವಿನಯ್ ಗಂಗಾಪುರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.