ಶ್ರೀನಿವಾಸಪುರ: ಎಲ್ಲಾ ಕಡೆಗಳಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಪ್ರೌಢ ಶಾಲೆ ಆವರಣದಲ್ಲಿ ಜಿಲ್ಲಾ ಎನ್ಡಿಆರ್ಎಫ್ ಇಲಾಖೆ, ತಾಲ್ಲೂಕು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪ್ರೌಢ ಶಾಲೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಾಲಾ ಸುರಕ್ಷತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎನ್ಡಿಆರ್ಎಫ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮಾತನಾಡಿ, ಸುರಕ್ಷತೆ ಸಾಮಾಜಿಕ ಜವಾಬ್ದಾರಿ. ಅದರ ನಿರ್ವಹಣೆ ಪ್ರತಿಯೊಬ್ಬರಿಗೂ ಸೇರಿದ್ದು. ಹಾಗಾಗಿ ವಿದ್ಯಾವಂತ ಸಮುದಾಯ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಬೆಂಕಿ, ನೀರು, ವಿಷ ಜಂತುಗಳಿಂದ ರಕ್ಷಣೆ ಪಡೆಯುವ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ಕಲಿಯಬೇಕು. ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳ, 108 ವಾಹನ, ಮಕ್ಕಳ ಸಹಾಯವಾಣಿಯಂಥ ಸಂಸ್ಥೆಗಳ ಸೇವೆ ಪಡೆಯಬೇಕು. ತುರ್ತು ಸೇವೆ ನೀಡುವ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಅವರಣದಲ್ಲಿ ಗಿಡ ನೆಡಲಾಯಿತು. ಪರಿಸರ ಮಾಲೀನ್ಯದ ದುಷ್ಪರಿಣಾಮ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.
ಪಿಡಿಒ ಮಂಗಳಾಂಬ, ಕಂದಾಯ ನಿರೀಕ್ಷಕ ಅಬೀಬ್, ಎನ್ಡಿಆರ್ಎಫ್ ಸಬ್ ಇನ್ಸ್ಪೆಕ್ಟರ್ ರಾಜ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಗೋವಿಂದರಾಜು, ಮುಖ್ಯ ಶಿಕ್ಷಕ ಕೆ.ಆರ್.ಶ್ರೀನಿವಾಸಲು, ಶಿಕ್ಷಕರಾದ ಸತೀಶ್ ರೆಡ್ಡಿ, ವೆಂಕಟರಮಣ, ಶಿಕ್ಷಕಿ ಅರುಣ, ಜಿಲ್ಲಾ ಅಗ್ನಿಶಾಮಕ ದಳಸ ಅಧಿಕಾಇ ಮುನಿರಾಜು, ತಾಲ್ಲೂಕು ಘಟಕದ ಅಧಿಕಾರಿ ಮುನಿರಾಜು, ಜಬೀವುಲ್ಲಾ ಇದ್ದರು.