ಶ್ರೀನಿವಾಸಪುರ: ವಿದ್ಯಾರ್ಥಿಗಳು ಸ್ವಂತ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮಾದರಿಯಾಗಿ ಬದುಕಬೇಕು, ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ಸೀಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.
ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸ್ಥಳೀಯ ಹಾಗೂ ವೈ.ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಾವೇ ನೀಡಿದ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಹಾಗಾಗಿಯೇ ನನ್ನ ದುಡಿಮೆಯ ಸ್ವಲ್ಪ ಭಾಗವನ್ನು ಪ್ರತಿ ತಿಂಗಳೂ ಉಳಿಸಿ, ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಳಸುತ್ತಿದ್ದೇನೆ ಎಂದು ಹೇಳಿದರು.
ನೆರವಿನ ಅಗತ್ಯವಿರುವ ಜನರಿಗೆ ಸಹಾಯ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸರಿ ಇರುವುದಿಲ್ಲ. ಹಾಗಾಗಿ ಅವರಿಗೆ ಶೈಕ್ಷಣಿಕ ನೆರವಿನ ಅಗತ್ಯವಿದೆ. ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಜತೆಗೆ, ದಾನಿಗಳು ನೆರವು ನೀಡಲು ಮುಂದೆ ಬರಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಜಿ.ಶಿವಾನಂದರೆಡ್ಡಿ ಮಾತನಾಡಿ, ಎಸ್.ಆರ್.ಧರ್ಮೇಶ್ ಯಾವುದೇ ಪ್ರಚಾರ ಬಯಸದೆ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ಸರ್ಕಾರಿ ಶಾಲಾ ಮಕ್ಕಳ ಓದಿಗೆ ವಿನಿಯೋಗಿಸುತ್ತಿದ್ದಾರೆ. ಪರಿಸರ ರಕ್ಷಣೆ, ಸಾರ್ವಜನಿಕ ಆರೋಗ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಕೊಡುಗೈ ದಾನಿಗೆ ಸಾಮಾಜಿಕ ಮನ್ನಣೆ ದೊರೆಯಬೇಕು. ಅವರ ಮಾದರಿ ಅನುಕರಣೀಯ ಎಂದು ಹೇಳಿದರು.
ಶಿಕ್ಷಕರಾದ ಎನ್.ಆರ್.ರಮೇಶ್, ವೇಣುಗೋಪಾಲ್, ಮುಖ್ಯ ಶಿಕ್ಷಕ ಡಿ.ಎನ್.ರಾಮಚಂದ್ರ ಸಮಾರಂಭದಲ್ಲಿ ಮಾತನಾಡಿದರು.
ಸಿಆರ್ಪಿ ಆರ್.ಮಂಜುನಾಥರೆಡ್ಡಿ, ಶಿಕ್ಷಕರಾದ ಡಿ.ಎ.ರಾಜೇಂದ್ರ ಪ್ರಸಾದ್, ಶಿವಣ್ಣ, ನರಸಿಂಹರೆಡ್ಡಿ, ಶಿಕ್ಷಕಿ ಶಾರದ ಇದ್ದರು.