ಶ್ರೀನಿವಾಸಪುರ: ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞ ಡಾ. ಬಾಬುರೆಡ್ಡಿ ಹೇಳಿದರು.
ತಾಲ್ಲೂಕಿನ ಆರಿಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಡಾ. ಅಬ್ದುಲ್ ಕಲಾಂ ಅವರಂಥ ಮಹಾನ್ ಚಿಂತಕರ ಆದರ್ಶದ ಬೆಳಕಲ್ಲಿ ಬೆಳೆಯಬೇಕು ಎಂದು ಹೇಳಿದರು.
ಗ್ರಾಮದ ಮುಖಂಡರಾಗಿದ್ದ ದಿವಂಗತ ಎ.ನಾರಾಯಣಸ್ವಾಮಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ನಿರ್ಮಿಸಿದರು. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಪೋಷಕರು ಹಾಗೂ ಶಿಕ್ಷಕರಿಗೆ ಹೆಸರು ತರಬೇಕು ಎಂದು ಹೇಳಿದರು.
ಡಾ. ಸಿರಿಲಕ್ಷ್ಮಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡು ಬೆಳೆಯಬೇಕು. ಪರಿಶ್ರಮದ ಮೂಲಕ ಸಾಧನೆ ಹಾದಿಯಲ್ಲಿ ಸಾಗಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆದು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಬಾಬುರೆಡ್ಡಿ, ಡಾ. ಸಿರಿಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ವೆಂಕಟರೆಡ್ಡಿ, ಮುನಿರೆಡ್ಡಿ, ಶ್ರೀರಾಮರೆಡ್ಡಿ, ಅಶೋಕರೆಡ್ಡಿ, ಮುಖ್ಯ ಶಿಕ್ಷಕಿ ಕೆ.ಭಾಗ್ಯಲಕ್ಷ್ಮಿ, ಶಿಕ್ಷಕರಾದ ವೆಂಕಟೇಶ ಬಾಬು, ಶ್ರೀನಾಥ್, ಎಚ್.ಆಂಜನಪ್ಪ, ಸುಜಾತ, ಬಿ.ವಿ.ರತ್ನಮ್ಮ, ಮುರಳಿ ಬಾಬು ಇದ್ದರು.