ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ವತಿಯಿಂದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇಂಗ್ಲೀಷ್ ನಿಘಂಟುಗಳ ವಿತರಣೆ ಮಾಡಿ,ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯನ್ನು ಹೊಂದಿದ್ದು, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗಡಿಭಾಗದ ಮುದಿಮೊಡಗು ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್ವತಿಯಿಂದ ಇಂಗ್ಲೀಷ್ ನಿಘಂಟುಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಎಸ್.ಎನ್. ಮಂಜುನಾಥರೆಡ್ಡಿ, ಗಡಿಭಾಗದಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆಂಗ್ಲಭಾಷೆಯು ಕಷ್ಟಕರವಾಗಿದ್ದು, ಈ ನಿಘಂಟಿನಿಂದ ಆಂಗ್ಲ ಪದಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಅರ್ಥಮಾಡಿಕೊಂಡು ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಳ್ಳಬೇಕು ಎನ್ನುತ್ತಾ, ರೋಟರಿಯು ಸೇವಾ ಮನೋಬಾವದಿಂದ ಎಲ್ಲಾ ಸದಸ್ಯರು ಪರಸ್ಪರ ಸಹಕಾರದಿಂದ ಸಮಾಜದ ಒಳಿತಿಗಾಗಿ ಅನೇಕ ಜನಪರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿದರು.ಈ ಸಂದರ್ಭದಲ್ಲಿ ನಿರ್ದೇಶಕ ಜಗದೀಶರೆಡ್ಡಿ, ಮುಖ್ಯ ಶಿಕ್ಷಕ ಸತ್ಯನಾರಾಯಣರೆಡ್ಡಿ, ಸಹ ಶಿಕ್ಷಕ ಶಶಿಧರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.