ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ನಗರದಲ್ಲಿ ಇಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸಿದ್ದ ಪರೀಕ್ಷಾರ್ಥಿಗಳಿಗೆ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್.ಶ್ರೀನಾಥ್ ಎನ್.95 ಮಾಸ್ಕ್ ವಿತರಿಸಿದರೆ, ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್,ಕಾರ್ಯದರ್ಶಿ ಸುಧಾಕರ್ ಮಕ್ಕಳಿಗೆ ಹೂಗುಚ್ಚ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್, ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳಿಗೂ ಎನ್.95 ಮಾಸ್ಕ್ ವ್ಯವಸ್ಥೆ ಮಾಡಿದ್ದು, ಮಕ್ಕಳ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಮಕ್ಕಳ ಸಾಮಾಜಿಕ ಅಂತರ ಪಾಲನೆ,ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮತ್ತಿತರ ಪರೀಕ್ಷಾ ಕಾರ್ಯಗಳನ್ನು ಕಂಡ ಅವರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮಾರಕ ಕೊರೋನಾಗೆ ಸೆಡ್ಡು ಹೊಡೆಯುವ ಮೂಲಕ ಸಣ್ಣ ಲೋಪಕ್ಕೂ ಅವಕಾಶವಿಲ್ಲದಂತೆ ಅದ್ಬುತ ಸಿದ್ದತೆ ನಡೆಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಮಹಾಮಾರಿಯಿಂದಾಗಿ ಈಗಗಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲ, ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಕ್ಕಳ ಶೈಕ್ಷಣಿಕ ಜೀವನದ ಪ್ರಥಮ ಪಬ್ಲಿಕ್ ಪರೀಕ್ಷೆಯಾಗಿದ್ದು, ಕೋವಿಡ್ಗೆ ಸೆಡ್ಡುಹೊಡೆದು ಶಿಕ್ಷಣ ಇಲಾಖೆ ಅತ್ಯಂತ ಸಾಹಸಮಯ ಕೆಲಸ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಂದೇ ಮಾದರಿಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗುವಂತೆ ಇಲಾಖೆ ಕೆಲಸ ಮಾಡಿದೆ, ಮಕ್ಕಳು ಆತ್ಮಸ್ಥೈರ್ಯದಿಂದಲೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು, ಯಾರಲ್ಲೂ ಭಯ ಕಾಣಲಿಲ್ಲ ಎಂದು ತಿಳಿಸಿದರು.
ಮಕ್ಕಳ ಮುಂದಿನ ಜೀವನದ ಹಾದಿ ನಿರ್ಧರಿಸುವ ಪ್ರಮುಖ ಹಂತ ಇದಾಗಿದ್ದು, ಮಕ್ಕಳಿಗೆ ಪರೀಕ್ಷೆ ನಡೆಸಲು ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದ ಅವರು, ಕಳೆದ ವರ್ಷವೂ ಶಿಕ್ಷಣ ಇಲಾಖೆ ಕೋವಿಡ್ ಸಂಕಷ್ಟದಲ್ಲೇ ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದನ್ನು ಗಮನಿಸಿದ್ದೇವೆ ಎಂದರು.
ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಆತಂಕ ಕೊನೆಯಾಗಿಸುವ ಉದ್ದೇಶದಿಂದ ಸೇವಾದಳದಿಂದ ಅವರಿಗೆ ಮಾಸ್ಕ್ ಜತೆ ಹೂಗುಚ್ಚ ನೀಡಿ ಶುಭ ಹಾರೈಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಹೆಮ್ಮಾರಿ ಮಕ್ಕಳ ಶೈಕ್ಷಣಿಕ ಬದುಕಿಗೆ ಬರೆ ಹಾಕಿದೆ, ಅನೇಕ ಮಕ್ಕಳು ಇಂದು ಕಲಿಕೆಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ ಎಂದ ಅವರು, ಪರೀಕ್ಷೆ ನಡೆಸಬೇಕೇ,ಬೇಡವೇ ಎಂಬ ಪರ-ವಿರೋಧಗಳ ನಡುವೆ ಶಿಕ್ಷಣ ಇಲಾಖೆ ದಿಟ್ಟ ಕ್ರಮ ಕೈಗೊಂಡು ಧೈರ್ಯದಿಂದ ಪರೀಕ್ಷೆ ನಡೆಸಿದ್ದು, ಸಂಘ ಸಂಸ್ಥೆಗಳೂ ಸಹಕಾರ ನೀಡುತ್ತಿವೆ ಎಂದರು.
ಸೇವಾದಳ ಹಾಗೂ ರೋಟರಿಕಾರ್ಯದರ್ಶಿ ಸುಧಾಕರ್, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಜತೆಗೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಜಾಗೃತಿಯನ್ನು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಭಯ ಹೋಗಲಾಡಿಸಿ ಮಕ್ಕಳು ನೆಮ್ಮದಿಯಿಂದ ಪರೀಕ್ಷೆ ಬರೆಯುವ ವಾತಾವರಣವನ್ನು ಇಲಾಖೆ ಸೃಷ್ಟಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿಯೂ ಮಕ್ಕಳಿಗೆ ಅರಿವು ನೀಡಿರುವುದು ಶ್ಲಾಘನೀಯ ಎಂದರು.
ಎನ್ಜಿಹೆಚ್ಎಸ್ ಶಾಲೆ ಉಪಪ್ರಾಂಶುಪಾಲ ರುದ್ರಪ್ಪ, ಮಕ್ಕಳಿಗೆ ಗುಣಮಟ್ಟದ ಮಾಸ್ಕ್ ನೀಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿರುವ ರೋಟರಿ ಸೆಂಟ್ರಲ್ ಹಾಗೂ ಸೇವಾದಳ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೋಟರಿ ರಾಮಚಂದ್ರೇಗೌಡ, ಸಿಆರ್ಪಿ ಪದ್ಮನಾಭ್ ಮತ್ತಿತರರು ಉಪಸ್ಥಿತರಿದ್ದರು.