ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕೋವಿಡ್ ಕಾರ್ಮೋಡ ಕರಗುತ್ತಿದ್ದು, ಶಾಲೆಯತ್ತ ಖುಷಿಯಿಂದ ಬರುತ್ತಿರುವ ನೀವು ಜಾಗೃತಿ ವಹಿಸುವ ಮೂಲಕ ಕೋವಿಡ್ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ ಹಾಗೂ ಸಮಾಜಸೇವಕ ಸಿ.ಎಂ.ಆರ್.ಶ್ರೀನಾಥ್ ಕರೆ ನೀಡಿದರು.
ಜಿಲ್ಲೆಯಾದ್ಯಂತ 9 ಮತ್ತು 10ನೇ ತರಗತಿಯ ಭೌತಿಕ ತರಗತಿಗಳು ಆರಂಭಗೊಂಡಿರುವ ಹಿನ್ನಲೆಯಲ್ಲಿ ರೋಟರಿ ಸೆಂಟ್ರಲ್ ಹಾಗೂ ಭಾರತ ಸೇವಾದಳ ವತಿಯಿಂದ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಸಿಹಿ ಹಾಗೂ ಗುಣಮಟ್ಟದ ಮಾಸ್ಕ್ ಕೊಡುಗೆಯಾಗಿ ನೀಡಿ ಕೋವಿಡ್ ಜಾಗೃತಿ ಮೂಡಿಸಿ ಶುಭ ಕೋರಿದರು.
ಕೋವಿಡ್ ಹೆಮ್ಮಾರಿಯಿಂದ ಶೈಕ್ಷಣಿಕ ಪ್ರಗತಿಗೆ ಕುತ್ತಾಗಿದೆ, ಇದೀಗ ಸೋಂಕು ಕಡಿಮೆಯಾಗಿರುವುದರಿಂದ ಸರ್ಕಾರ ಶಾಲೆ ಆರಂಭಕ್ಕೆ ಹಸಿರು ನಿಶಾನೆ ತೋರಿದೆ ಆದರೆ ಮಕ್ಕಳು ಜಾಗೃತಿಯಿಂದಿರಬೇಕು ಎಂದು ಕಿವಿಮಾತು ಹೇಳಿದರು.
ಕೋವಿಡ್ ಇಲ್ಲ ಎಂದು ಉದಾಸೀನ ತೋರದಿರಿ ಎಂದ ಅವರು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಳ್ಳುವ ಮೂಲಕ ಕೋವಿಡ್ನಿಂದ ದೂರವಿರಿ ಎಂದು ಸಲಹೆ ನೀಡಿದರು.
ಅರಾಭಿಕೊತ್ತನೂರು ಶಾಲೆ ಪ್ರಕೃತಿಯ ಮಡಿಲಲ್ಲಿ ಅತ್ಯಂತ ಸುಂದರವಾಗಿದೆ, ಈ ಶಾಲೆಯ ಮುಖ್ಯಶಿಕ್ಷಕರು,ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ದಿಗೆ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಶಾಲೆಗೆ ಅಗತ್ಯವಾದ ಸೈಕಲ್ ಸ್ಟಾಂಡ್ ನಿರ್ಮಿಸಿಕೊಡುವ ಭರವಸೆ ನೀಡಿದರು.
ರೋಟರಿ,ಭಾರತ ಸೇವಾದಳ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಸುಂದರವಾಗಿದೆ, ಈ ಶಾಲೆಯಲ್ಲಿ ಸೇವಾದಳ ಘಟಕ ಆರಂಭಿಸಿ, ಶಿಸ್ತು, ರಾಷ್ಟ್ರಪ್ರೇಮದ ಶಿಕ್ಷಣ ನೀಡುವ ಹಾದಿಯಲ್ಲಿ ಘಟಕಕ್ಕೆ ಅಗತ್ಯವಾದ ಸಮವಸ್ತ್ರ ಕೊಡುಗೆ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಈ ಶಾಲೆಯಲ್ಲಿ ಹೆಚ್ಚಿನವರು ಬಡ ಮಕ್ಕಳೇ ಆಗಿದ್ದೀರಿ, ಆದರೆ ಕಲಿಕೆಗೆ ಬಡತನ ಅಡ್ಡಿಯಾಗದಂತೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಹಾರೈಸಿದರು.
ಈ ಶಾಲೆಯ ಸುಂದರ ಪರಿಸರ ಮಕ್ಕಳನ್ನು ಕೈಬೀಸಿ ಕರೆಯುವಂತಿದೆ, ಇಲ್ಲಿರುವ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ ಜಿಲ್ಲೆಗೆ ಮಾದರಿಯಾಗಿದೆ ಎಂದು ತಿಳಿಸಿ, ಮಕ್ಕಳು ಸಿಕ್ಕಿರುವ ಸೌಲಭ್ಯ ಸದುಪಯೋಗ ಮಾಡಿಕೊಳ್ಳಿ ಸಾಧಕರಾಗಿ ಹೊರಹೊಮ್ಮಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಸರ್ಕಾರಿ ಶಾಲೆಗಳತ್ತ ನೆರವಿನ ಹಸ್ತ ಚಾಚಿರುವ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್, ಕಾರ್ಯದರ್ಶಿ ಸುಧಾಕರ್ ಅವರಿಗೆ ಧನ್ಯವಾದ ಸಲ್ಲಿಸಿ ಮತ್ತಷ್ಟು ಅಗತ್ಯಗಳನ್ನು ಪೂರೈಸಲು ನೆರವಾಗಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ದ್ರಾಕ್ಷರಸ ಮಂಡಳಿ ನಿರ್ದೇಶಕ ಅಭಿಲಾಶ್ ಕಾರ್ತಿಕ್, ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಜಯದೇವ್, ರೋಟರಿ ನಿರ್ದೇಶಕ ಸೊಮಣ್ಣ, ಟಮೋಟೋ ಮಂಡಿಯ ಪ್ರಕಾಶ್, ಪತ್ರಕರ್ತ ಚಾಂದ್ ಪಾಷ ಮತ್ತಿತರರು ಉಪಸ್ಥಿತರಿದ್ದರು.