ಕೆಜಿಎಫ್ ಕೊಳಚೆ ನಿವಾಸಿಗಳಿಗೆ ಸ್ವಂತ ಸೂರು ನೀಡಲು ಶಾಸಕಿ ರೂಪಕಲಾ ಆಗ್ರಹ


ಮನವಿಗೆ ಸಚಿವ ಸೋಮಣ್ಣ ಸ್ಪಂದನೆ-ತುರ್ತು ಸಭೆ-ಕುಟುಂಬಗಳ ಸರ್ವೆಗೆ ಸೂಚನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯ ಕೆಜಿಎಫ್ ನಗರದ ಸಂಕಷ್ಟದ ಬದುಕು ನಡೆಸುತ್ತಿರುವ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಸ್ವಂತ ಸೂರು ಒದಗಿಸುವ ಮೂಲಕ ನಗರಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಜ್ಯ ವಸತಿ ಸಚಿವ ಸೋಮಣ್ಣ ಭರವಸೆ ನೀಡಿ, ಕುಟುಂಬಗಳ ಸಮಗ್ರ ಸರ್ವೇ ನಡೆಸಲು ಸೂಚನೆ ನೀಡಿದರು.
ವಿಧಾನಸಭಾ ಅಧಿವೇಶನದಲ್ಲಿ ಕೆಜಿಎಫ್ ನಗರದ ಕೊಳಚೆ ಪ್ರದೇಶದ ನಿವಾಸಿಗಳು, ಗಣಿ ಕಾರ್ಮಿಕ ಕುಟುಂಬಗಳಿರುವ ಬಡಾವಣೆಗಳ ದುಸ್ಥಿತಿ ಕುರಿತು ಧ್ವನಿಯೆತ್ತಿದ್ದ ಶಾಸಕಿ ರೂಪಕಲಾ ಅವರ ಮನವಿಗೆ ಸ್ಪಂದಿಸಿದ ಸಚಿವರು, ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಕೋಲಾರ ಜಿಲ್ಲಾಧಿಕಾರಿಗಳು, ಸ್ಲಂ ಬೋರ್ಡ್, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು.
ಹಾಲಿ ಕೆಜಿಎಫ್ ನಗರದಲ್ಲಿ ಘೋಷಿತ 17 ಕೊಳಚೆ ಪ್ರದೇಶಗಳಿವೆ, 15 ವಾರ್ಡುಗಳಲ್ಲಿ ಕೊಳಚೆ ಪ್ರದೇಶಗಳಂತಿರುವ 15 ಸ್ಲಂಗಳನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆ, ಜತೆಗೆ ಕೆಜಿಎಫ್‍ನಲ್ಲಿ ಗಣಿ ಕಾರ್ಮಿಕ ಕುಟುಂಬಳು ಶೆಡ್‍ಗಳಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲದೇ ಜೀವನ ನಡೆಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತರಲಾಯಿತು.
ಖುದ್ದು ಭೇಟಿಗೆ
ಸೋಮಣ್ಣ ಭರವಸೆ
ಸಚಿವ ಸೋಮಣ್ಣ ಮಾತನಾಡಿ, ನಾನೇ ಖುದ್ದ ಕೆಜಿಎಫ್ ನಗರಕ್ಕೆ ಭೇಟಿ ನೀಡುವುದಾಗಿ ತಿಳಿಸಿ, ಘೋಷಿತವಲ್ಲದ ಸ್ಲಂಗಳಲ್ಲಿನ ಪರಿಸ್ಥಿತಿ, ಕುಟುಂಗಳ ಸ್ಥಿತಿ, ಅವರ ಉದ್ಯೋಗ, ಜೀವನ ಮಟ್ಟದ ಕುರಿತು ಸಮಗ್ರ ಸರ್ವೇ ನಡೆಸಿ ಕೂಡಲೇ ವರದಿ ನೀಡಲು ಜಿಲ್ಲಾಧಿಕಾರಿಗಳು ಹಾಗೂ ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕ ಶರಣಪ್ಪ ಅವರಿಗೆ ಸೂಚಿಸಿದರು.
ಗಣಿ ಪ್ರದೇಶದ ಶೆಡ್‍ಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿರುವ ಕುಟುಂಬಗಳ ಸ್ಥಿತಿಗತಿ ಸರ್ವೇ ನಡೆಸಿ ವರದಿ ನೀಡಿ, ಈ ಕುಟುಂಬಳಿಗೆ ನಿವೇಶನ ಒದಗಿಸಲು ಅಗತ್ಯವಾದ ಸರ್ಕಾರಿ ಜಾಗ ಗುರುತಿಸಿ ಎಂದು ಸೂಚಿಸಿದ ಸಚಿವರು, ಅತಿ ತುರ್ತಾಗಿ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಂಕಷ್ಟದಲ್ಲಿ ಜನ
ಶೀಘ್ರ ಮನೆ ನೀಡಿ
ಶಾಸಕಿ ರೂಪಕಲಾ ಮಾತನಾಡಿ, ಸುಮಾರು 30 ಸಾವಿರ ಕಾರ್ಮಿಕರ ಕುಟುಂಬಗಳು ಇಂದು ಬೀದಿಪಾಲಾಗಿದ್ದಾರೆ, ಈವರೆಗೂ ಯಾರಿಗೂ ನಿವೇಶನ,ಮನೆಯ ಹಕ್ಕು ಪತ್ರ ನೀಡಿಲ್ಲ, ಕಳೆದ ಮಳೆಗಾಲದಲ್ಲಿ ಗಣಿ ಶೆಡ್‍ಗಳಲ್ಲಿರುವ ಕಾರ್ಮಿಕ ಕುಟುಂಬಗಳು ಅನುಭವಿಸಿದ ಯಾತನೇ ಕಣ್ಣಾರೆ ಕಂಡಿದ್ದೇನೆ, ಕೂಡಲೇ ಹಕ್ಕು ಪತ್ರ ನೀಡಲು ಕ್ರಮವಹಿಸಿ ಎಂದು ಮನವಿ ಮಾಡಿದರು.
ಕಳೆದ 30 ವರ್ಷಗಳಲ್ಲಿ ಈ ಕುಟುಂಬಗಳಿರುವ ವ್ಯಾಪ್ತಿಯನ್ನು ಸ್ಲಂ ಎಂದು ಘೋಷಿಸಿಲ್ಲ, ಅವರ ಬದುಕು ನರಕವಾಗಿದೆ, 40 ವರ್ಷಗಳಿಂದ ಈ ಕಾರ್ಮಿಕರಿಗೆ ಒಂದೇ ಒಂದು ಮನೆ,ನಿವೇಶನ ಹಂಚಿಕೆಯಾಗಿಲ್ಲ, 40 ವರ್ಷಗಳಿಂದ ನ್ಯಾಯವೂ ಸಿಕ್ಕಿಲ್ಲ ಈ ಕಾರ್ಮಿಕರಿಗೆ ನ್ಯಾಯ ಒದಗಿಸಿ ಎಂದು ಕೋರಿದರು.
ಸಭೆಯಲ್ಲಿ ಹಾಜರಿದ್ದ ಕೋಲಾರ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಕೆಜಿಎಫ್ ನಗರದಲ್ಲಿ ಇರುವ ಸ್ಲಂ ಪ್ರದೇಶಗಳನ್ನು ಗುರುತಿಸಿ, ಸಮಗ್ರ ಸರ್ವೇ ಕಾರ್ಯ ನಡೆಸಿ ಅಲ್ಲಿನ ಜನರ ಸ್ಥಿತಿಗತಿಗಳ ಆಧಾರದ ಮೇಲೆ ಸ್ಲಂಗಳೆಂದು ಘೋಷಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕ ಶರಣಪ್ಪ, ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಆಯುಕ್ತ ನವೀನ್ ಚಂದ್ರ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಜನರಲ್ ಮ್ಯಾನೇಜರ್ ಮಹದೇವಪ್ರಸಾದ್, ಕೆಜಿಎಫ್ ತಹಸೀಲ್ದಾರ್ ಸುಜಾತಾ, ಸ್ಲಂ ಬೋರ್ಡ್‍ನ ಇಇ, ಎಇಇ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.