ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು : ಡಾ. ಮಹಮದ್ ಷರೀಫ್

ಶ್ರೀನಿವಾಸಪುರ: ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಮಹಮದ್ ಷರೀಫ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಆರೋಗ್ಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಿಆರ್‍ಸಿ ಸಂಯೋಜಕಿ ಕೆ.ಸಿ.ವಸಂತ ಮಾತನಾಡಿ, ಅಕ್ಷರ ಮತ್ತು ಆರೋಗ್ಯ ಒಂದು ನಾಣ್ಯದ ಎರಡು ಮುಖಗಳು. ಮಕ್ಕಳು ಅಕ್ಷರ ಕಲಿಯಬೇಕಾದರೆ ಅವರು ಆರೋಗ್ಯವಂತರಾಗಿರಬೇಕು. ಅನಾರೋಗ್ಯ ಅಕ್ಷರ ಕಲಿಕೆಗೆ ಮಾರಕವಾಗಿ ಪರಿಣಮಿಸುತ್ತದೆ. ಆದ್ದರಿಂದ ಶಿಕ್ಷಕ ಸಮುದಾಯ ಮಕ್ಕಳಿಗೆ ಉತ್ತಮ ಹವ್ಯಾಸಗಳ ಪರಿಚಯ ಮಾಡಿಕೊಡಬೇಕು. ರೋಗ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಸಂಯೋಜಕ ಶಿವರಾಜ್, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮ ವಿವಿಧ ರೋಗಗಳು ಮತ್ತು ತಡೆಯುವ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ ರವಿಕುಮಾರ್, ಸಂಘಟಕರಾದ ವಿ.ಎಂ.ನಾರಾಯಣಸ್ವಾಮಿ, ವಿಶ್ವನಾಥ್, ಖಜಾಂಚಿ ಜಿ.ವಿ.ಚಂದ್ರಪ್ಪ, ರಾಮಕೃಷ್ಣೇಗೌಡ, ಶಿವರಾಜ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಂಜಿಲಮ್ಮ ಇದ್ದರು.