ಈಗ ಚುನಾವಣೆ ಹತ್ತಿರವಾಗಿದೆ, ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳಿಗೆ ಗುಡಿಸಲು ಕಾಣಿಸುತ್ತದೆ, ಕೇರಿಯ ದಾರಿ ಕಾಣುತ್ತದೆ, ಗೆದ್ದು ಅಧಿಕಾರ ಹಿಡಿದ ಮೇಲೆ ತಿರುಗಿಯೂ ನೋಡದ ರಾಜಕಾರಣಿಗಳು ಈಗ ಊರಿನ ಕೇರಿಯ ದಾರಿ ಹಿಡಿದು ನಡೆದು ಬರುತ್ತಾರೆ, ಗುಡಿಸಿಲಿನಲ್ಲಿ ನೀರು ಕುಡಿಯುತ್ತಾರೆ, ಕಂಡ ಕಂಡವರಿಗೆಲ್ಲಾ ಕೈ ಮುಗಿಯುತ್ತಾರೆ. ಈ ನಯ ವಿನಯದ ನಾಟಕಕ್ಕೆ ಕಾರಣ ಬಡತನ, ಸಿರಿತನ, ಹೆಣ್ಣು ಗಂಡು ಮತ್ತು ಜಾತಿ ಮತ ಬೇಧವಿಲ್ಲದೆ ಭಾರತದ ನಾಗರೀಕರಿಗೆ ಸಂವಿಧಾನದ ಅಡಿಯಲ್ಲಿ ನೀಡಿರುವ ಮತದಾನದ ಹಕ್ಕು. ಪ್ರಜಾಪ್ರಭುತ್ವದಲ್ಲಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರಜೆಗಳ ಕೈಯಲ್ಲಿ ಇದೆ. ಪ್ರಜೆಗಳು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವುದರ ಮೂಲಕ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಆದರೆ ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ಸಿದ್ಧಾಂತಗಳನ್ನು ನೋಡುವುದಿಲ್ಲ, ಚುನಾವಣೆಗೆ ನಿಂತ ವ್ಯಕ್ತಿಯ ಗುಣಾವಗುಣಗಳನ್ನು ಪರಿಗಣಿಸುವುದಿಲ್ಲ, ಮತವೆಂಬ ಅಮೂಲ್ಯವಾದ ಹಕ್ಕನ್ನು ಕೇವಲ ಸೀರೆಗೆ, ಸಾರಾಯಿಗೆ, ಕುಕ್ಕರ್ ಗೆ, ಹೀಗೆ ಓಟನ್ನು ನೋಟಿಗಾಗಿ ಮಾರಿಕೊಳ್ಳುವುದನ್ನು ಕಂಡಾಗಲೆಲ್ಲಾ ಮತದಾನದ ಹಕ್ಕಿನ ಮಹತ್ವನ್ನು ಜನ ಮರೆತಿದ್ದಾರೆ ಎನಿಸುತ್ತದೆ. ಮತದಾನದ ಹಕ್ಕು ಯಾರಿಗೆ ಇಲ್ಲವೋ ಅವರಿಗೆ ಮತದ ಹಕ್ಕಿನ ಮಹತ್ವ ಅರಿವಾಗುತ್ತದೆ. ಅಂತಹ ಸಮಯದಲ್ಲಿ ಮತದಾನದ ಹಕ್ಕು ಹೇಗೆ ಬಂತು, ಹೆಣ್ಣು, ಗಂಡು ಹಾಗೂ ಜಾತಿ, ಮತದ ತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕು ಬರುವಲ್ಲಿ ನಿಜವಾದ ಹೋರಾಟವನ್ನು ಮಾಡಿದವರನ್ನು ಸ್ಮರಿಸಬೇಕಾಗುತ್ತದೆ. ಈ ರೀತಿ ಸಮಾನ ಮತದಾನದ ಹಕ್ಕು ಪ್ರಾಪ್ತವಾಗುವಲ್ಲಿ ಹೋರಾಟ ಮಾಡಿದವರಲ್ಲಿ ಪ್ರಮುಖ ಪಾತ್ರ ವಹಿಸಿದವರು ಶ್ರೀಮತಿ ಸರೋಜಿನಿ ನಾಯ್ಡು ಮತ್ತು ಡಾ. ಬಿ.ಆರ್.ಅಂಬೇಡ್ಕರ್ ರವರು.
ಭಾರತದಲ್ಲಿ ಮತದಾನದ ಹಕ್ಕು ಒಂದು ಸಾಂವಿಧಾನಿಕ ಹಕ್ಕು. ಕಾನೂನಿನ ಅಡಿಯಲ್ಲಿ ಅನರ್ಹತೆಗೊಂಡ ಕೆಲವರನ್ನು ಹೊರತುಪಡಿಸಿದರೆ ಉಳಿದಂತೆ 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರೀಕರಿಗೂ ಮತದಾನದ ಹಕ್ಕು ಇದೆ. ಆದರೆ ಈ ಹಕ್ಕು ಎಲ್ಲರಿಗೂ ಅಧಿಕೃತವಾಗಿ ಲಭಿಸಿದ್ದು ಈ ಹಕ್ಕಿನ ನಿಬಂಧನೆಗಳನ್ನು ಜೂನ್ 1949 ರಲ್ಲಿ ಕರಡು ಸಂವಿಧಾನದ ಭಾಗವಾಗಿ ಮಂಡಿಸಲಾಯಿತು ನಂತರ ಇದು 26-01-1950 ರಂದು ಸಂವಿಧಾನ ಅಂಗೀಕಾರವಾಗುವುದರ ಮೂಲಕ ಅದು ಸಾಂವಿಧಾನಿಕ ಹಕ್ಕಾಗಿ ಪ್ರಾಪ್ತವಾಯಿತು. ಆದರೆ ಈ ಹಕ್ಕು ಸ್ವಾತಂತ್ರ್ಯ ಪೂರ್ವದಲ್ಲಿ ಇರಲಿಲ್ಲ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತ ವ್ಯವಸ್ಥೆ ಇತ್ತು, ಅದಕ್ಕೂ ಮೊದಲು ಭಾರತದಲ್ಲಿ ರಾಜ ಪ್ರಭುತ್ವ ಇತ್ತು, ಈ ರೀತಿಯ ರಾಜಪ್ರಭುತ್ವದಲ್ಲಾಗಲಿ, ಬ್ರಿಟಿಷ್ ಆಡಳಿತದಲ್ಲಾಗಲಿ ಈಗಿನ ರೀತಿಯ ಮತದಾನ ಹಕ್ಕು ಇರಲಿಲ್ಲ, ಆದರೂ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟವು ಕಾವು ಪಡೆದಂತೆ, ಬ್ರಿಟಿಷರು ಭಾರತದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಯಿತು, ಆ ರೀತಿ ಆಡಳಿತ ವ್ಯವಸ್ಥೆಯಲ್ಲಿ ಸದಸ್ಯನನ್ನು ಆಯ್ಕೆ ಮಾಡಿಕೊಳ್ಳುವ ಮತದಾನದ ಹಕ್ಕು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ನೀಡಿತ್ತು. ಹಾಗೆ ನೋಡುವುದಾದರೆ ಮೊದಲು ಮತದಾನದ ವ್ಯವಸ್ಥೆ ನಮ್ಮ ಕರ್ನಾಟಕದ ಮೈಸೂರು ಸಂಸ್ಥಾನದಲ್ಲಿ ನಡೆಯಿತು. 1862 ರಲ್ಲಿ ಮೈಸೂರು ಪುರಸಭೆ ಅಸ್ತಿತ್ವಕ್ಕೆ ಬಂದರೂ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಮೈಸೂರು ಮಹಾರಾಜರಿಗೆ ಇತ್ತು, ಆದರೆ 1892 ರಲ್ಲಿ ಮೈಸೂರು ಮಹಾರಾಜರಾಗಿದ್ದ ಚಾಮರಾಜ ಒಡೆಯರ್ ರವರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಮತದಾನದ ಹಕ್ಕು ಗಣ್ಯರಿಗೆ ನೀಡಲು ಬಯಸಿದರು ಹಾಗೆ 1892 ರಲ್ಲಿ ಮೈಸೂರು ಪುರಸಭೆಗೆ ನಡೆದ 20 ಸದಸ್ಯರ ಸ್ಥಾನಗಳಿಗೆ ನಡೆದ ಮತದಾನದಲ್ಲಿ ಮತದಾನದ ಹಕ್ಕು ಪಡೆದವರು ಕೇವಲ 250 ಮಂದಿ ಗಣ್ಯರು ಮಾತ್ರ. ಅವರು ವಕೀಲರು, ಸರ್ಕಾರಿ ನೌಕರರು, ಪಟೇಲರು, ಶ್ಯಾನುಭೋಗರು, ಪದವೀಧರರು. ಹೀಗೆ ಕೇವಲ ಕೆಲವೇ ಗಣ್ಯರಿಗೆ, ಉನ್ನತ ಸ್ಥಾನಮಾನ ಹೊಂದಿದವರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ಸ್ತ್ರೀಯರಿಗೂ ನೀಡಬೇಕೆಂದು ಹೋರಾಟ ಮಾಡಿದವರಲ್ಲಿ ಶ್ರೀಮತಿ ಸರೋಜಿನಿ ನಾಯ್ಡುರವರು ಪ್ರಮುಖರಾದರೆ, ಜಾತಿ ಮತ ಅಸ್ಪೃಶ್ಯತೆ ಬೇಧವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕು ನೀಡಬೇಕೆಂದು ಹೋರಾಟ ಮಾಡಿದವರು ಡಾ. ಬಿ.ಆರ್.ಅಂಬೇಡ್ಕರ್ ರವರು.
ಶ್ರೀಮತಿ ಸರೋಜಿನಿ ನಾಯ್ಡು ರವರು ಗಾಂಧೀಜಿಯವರಿಂದ “ನೈಟಿಂಗೇಲ್ ಆಫ್ ಇಂಡಿಯಾ” ಎಂದು ಕರೆಸಿಕೊಂಡ ಇವರು ದಿನಾಂಕ 13-02-1849 ರಂದು ಹೈದರಾಬಾದ್ ಪ್ರಾಂತ್ಯದಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಇವರು ಮದ್ರಾಸ್, ಲಂಡನ್ ಮತ್ತು ಕೇಂಬ್ರಿಡ್ಜ್ ನಲ್ಲಿ ಶಿಕ್ಷಣ ಪಡೆದರು. ಇವರು ಗೋಪಾಲಕೃಷ್ಣ ಗೋಖಲೆಯವರಿಂದ ಪ್ರೇರಿತರಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಪಾಲ್ಗೊಂಡು 1925 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು. ಇವರು ಮಹಿಳೆಯರಿಗೂ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಮತದಾನದ ಹಕ್ಕು ನೀಡಬೇಕು ಎಂದು ಹೋರಾಟ ಮಾಡಿದರು. 1917 ರಲ್ಲಿ ಭಾರತದ ವೈಸ್ ರಾಯ್ ಲಾರ್ಡ್ ಚೆಲ್ಮಸ್ ಪೋರ್ಡ ರವರಿಗೆ ಮತ್ತು ಎಡ್ವಿನ್ ಮಾಂಟೆಗೋರವರಿಗೆ ನಿಯೋಗದೊಂದಿಗೆ ಹೋಗಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಬೇಕೆಂದು ಮನವಿ ಸಲ್ಲಿಸಿದರು. 1918 ರ ಬಾಂಬೆ ಸಮಾವೇಶದಲ್ಲಿ ಸಹ ಮಹಿಳಾ ಮತದಾನದ ಹಕ್ಕಿನ ಬಗ್ಗೆ ಒತ್ತಿ ಹೇಳಿದರು, 1919 ರಲ್ಲಿ ಸಹ ಲಂಡನ್ ನಲ್ಲಿ ಸಂಸತ್ತಿನ ಜಂಟಿ ಆಯ್ಕೆ ಸಮಿತಿ ಮುಂದೆ ಭಾರತೀಯರು ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ವಿರುದ್ಧವಿಲ್ಲ ಎಂದು ಸಾಕ್ಷ್ಯ ಸಮೇತ ಮನವಿ ಸಲ್ಲಿಸಿದರು. ಇದರ ಫಲವಾಗಿ 1921 ರಿಂದ 1930 ರ ನಡುವೆ ನಡೆದ ಪ್ರಾಂತೀಯ ಮಂಡಳಿಗಳು ಮಹಿಳಾ ಪ್ರಾಂಚೈಸಿಯನ್ನು ಅನುಮೋದಿಸಿದವು. ಹೀಗೆ ಮಹಿಳೆಯರ ರಾಜಕೀಯ, ಶಿಕ್ಷಣ ಮತ್ತು ಮತದಾನದ ಹಕ್ಕಿಗಾಗಿ ಹೋರಾಟ ಮಾಡಿದವರಲ್ಲಿ ಶ್ರೀಮತಿ ಸರೋಜಿನಿ ನಾಯ್ಡು ರವರ ಪಾತ್ರ ಮಹತ್ವದ್ದಾಗಿದೆ.
ಭಾರತದಲ್ಲಿ ಸ್ವರಾಜ್ಯ ಮತ್ತು ಸ್ವ-ಆಡಳಿತದ ಬೇಡಿಕೆಗಳು ಹೆಚ್ಚಾದಾಗ ಡಾ.ಬಿ.ಆರ್.ಅಂಬೇಡ್ಕರ್ ರವರು ಭಾರತದಲ್ಲಿ ಅಸ್ಪೃಶ್ಯರಿಗೂ ಸಮಾನವಾದ ಶಿಕ್ಷಣ ಹಕ್ಕಿನ ಜೊತೆಗೆ ಮತದಾನದ ಹಕ್ಕು ನೀಡಬೇಕು ಎಂದು ಹೋರಾಟ ಮಾಡಿದರು. ಅವರ ಹೋರಾಟದ ಫಲವಾಗಿ ಮತ್ತು ಸಂವಿಧಾನದಲ್ಲಿ ಯಾವುದೇ ಜಾತಿ, ಮತ, ವರ್ಗ ಬೇಧವಿಲ್ಲದೆ, ಸ್ತ್ರೀ ಪುರುಷರೆಂಬ ಲಿಂಗತಾರತಮ್ಯವಿಲ್ಲದೆ ಎಲ್ಲರಿಗೂ ಅಂಬೇಡ್ಕರ್ ರವರು ಮತದಾನದ ಹಕ್ಕು ನೀಡಿದ ಫಲ ಇಂದು ನಮಗೆ ಮತದಾನ ಒಂದು ಸಾಂವಿಧಾನಿಕ ಹಕ್ಕಾಗಿ, ಜನಪ್ರತಿನಿಧಿಗಳು ಮನೆಯ ಬಾಗಿಲಿಗೆ ಬಂದು ಬೇಡುವಂತಾಗಿದೆ.
ಹೀಗೆ ಹಲವು ಮಹನೀಯರ ಹೋರಾಟ ಮತ್ತು ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯ ಮತ್ತು ರಚನೆಯಾದ ಸಂವಿಧಾನಕ್ಕೆ ನಾವು ಅಪಾರವಾದ ಗೌರವವನ್ನು ಸಲ್ಲಿಸುತ್ತೇವೆ. ಹಾಗೆಯೇ ಸಂವಿಧಾನ ರಚನೆ ಮಾಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಗೌರವಿಸುತ್ತೇವೆ. ಆದರೆ ನಿಜವಾಗಿಯೂ ನಾವು ಸಂವಿಧಾನಕ್ಕೆ ಹಾಗೂ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸುವುದೆಂದರೆ, ಅಂಬೇಡ್ಕರ್ ರವರ ಆಶಯಕ್ಕೆ ತಕ್ಕಂತೆ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಓಟಿಗಾಗಿ ನೋಟು ಮಾರಿಕೊಳ್ಳದೆ, ಮತ ಚಲಾಯಿಸಿದರೆ ನಮಗೇನು ಫಲ ಎಂದು ಮತದಾನ ಮಾಡದೆ ಮನೆಯಲ್ಲಿ ಕೂರದೆ, ಒಳ್ಳೆಯ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ.
ರಚನೆ:- ಬಿ.ಆರ್.ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ.