ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಬೀದಿ ಬದಿ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಾಲದ ಹಣವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ 226 ರೈತ ಫಲಾನುಭವಿಗಳಿಗೆ ರೂ. 2.4 ಕೋಟಿ ಸಾಲದ ಹಣದ ಚೆಕ್ ವಿತರಿಸಿ ಮಾತನಾಡಿದರು.
ಲಕ್ಷ್ಮೀಪುರ ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಸ್ತ್ರೀ ಶಕ್ತಿ ಸಂಘಗಳಿಗೆ ರೂ.9 ಕೋಟಿ ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಆ ಪೈಕಿ ರೂ.4 ಕೋಟಿ ಮರುಪಾವತಿಯಾಗಿದೆ. ಉಳಿದ ಹಣದ ಮರುಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾ.30 ರೊಳಗೆ ಅಗತ್ಯ ಇರುವ ಕಡೆಗಳಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ಪ್ರಾರಂಭಿಸಿದಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು. ಆ ಬಗ್ಗೆ ನಿಗದಿತ ಸಮಯದೊಳಗೆ ಸಹಕಾರ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಕೊಡಬೇಕು ಎಂದು ಹೇಳಿದರು.
ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೆ 126 ಕೆರೆಗಳ ಪೈಕಿ 70 ಕೆರೆಗಳಿಗೆ ನೀರು ಹರಿಸಲಾಗಿದೆ. ಹಂತ ಹಂತವಾಗಿ ಉಳಿದ ಕೆರೆಗಳಿಗೆ ನೀರು ಹರಿಸಲಾಗುವುದು. ಸ್ಮಶಾನ ಹಾಗೂ ಕೆರೆ ಒತ್ತುವರಿ ತೆರವುಗೊಳಿಸಲಾಗುವುದು. ಎಪಿಎಂಸಿ ವತಿಯಿಂದ ಸ್ಥಳೀಯ ಸಂತೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಮುಗಿದಿದೆ. ಆಯ್ಕೆಯಾಗಿರುವ ಸದಸ್ಯರು ಮತ ಕೇಳಲು ಹೋದಂತೆ, ಗ್ರಾಮಗಳಲ್ಲಿ ಸುತ್ತಾಡಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಬೇಕು. ಗುತ್ತಿಗೆ ಕೆಲಸ ಮಾಡುವುದನ್ನು ಬಿಟ್ಟು ಜನರ ಸಮಸ್ಯೆಗಳ ನಿವಾರಣೆಗೆ ಗಮನ ನೀಡಬೇಕು. ಎನ್‍ಆರ್‍ಇಜಿ ಯೋಜನೆಯಲ್ಲಿ ಜೆಸಿಬಿ ಬಳಸಿದರೆ ಸಹಿಸಲಾಗದು. ಬಡವರಿಗೆ ಕೂಲಿ ಸಿಗುವ ಯೋಜನೆ ದುರಪಯೋಗ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ರಾಜಕೀಯ ಚುನಾವಣೆಗೆ ಸೀಮಿತವಾಗಬೇಕು. ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಕ್ಷಪಾತ ಮಾಡದೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳು ಪ್ರಜೆಗಳಿಗೆ ಗೌರವ ನೀಡಬೇಕು. ಅವರ ಆರ್ಥಿಕಾಭಿವೃದ್ದಿಗೆ ಸಾಧ್ಯವಾದ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ನವೀಕೃತ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಕಸ ಸಾಗಿಸುವ ವಾಹನಕ್ಕೆ ಚಾಲನೆ ನೀಡಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಾಂದ್ ಪಾಷ, ಉಪಾಧ್ಯಕ್ಷೆ ಮಂಗಮ್ಮ, ಮುಖಂಡರಾದ ಕೃಷ್ಣಾರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ಎಲ್.ವಿ.ಅಸ್ಲಾಂ ಪಾಷ, ಜಮೀರ್ ಪಾಷ, ಸಮೀವುಲ್ಲಾ, ವೆಂಕಟೇಶ್ ಇದ್ದರು.