15 ಕೋಟಿ ಮೌಲ್ಯದ ಸರ್ಕಾರಿ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿದ ಆರ್ ಐ ಶ್ರೀಪತಿಗೆ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ-ಜನತಾದರ್ಶನದಲ್ಲಿ ದೂರು

ಕೋಲಾರ:- ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಂಬ್ರಹಳ್ಳಿ ಗ್ರಾಮದ ಸ.ನಂ.173ರ 6 ಎಕರೆ 19 ಗುಂಟೆ ಸುಮಾರು 15 ಕೋಟಿ ಮೌಲ್ಯದ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿ ಅಮಾನತ್ತಾಗಿದ್ದ ಕಂದಾಯ ನಿರೀಕ್ಷಕ ಎಂ.ಕೆ.ಶ್ರೀಪತಿ ಹಾಗೂ ಪ್ರಥಮ ದರ್ಜೆ ಗುಮಾಸ್ತ ಪ್ರಸಾದ್‍ಕುಮಾರ್ ಅವರನ್ನು ಮಾಲೂರು ಶಾಸಕ ನಂಜೇಗೌಡರು ಕಂದಾಯ ಸಚಿವ ಕೃಷ್ಣ ಬೈರೇಗೌಡರ ಮೇಲೆ ಪ್ರಭಾವ ಬೀರಿ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿರುವುದನ್ನು ರದ್ದುಪಡಿಸಲು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಸಚಿವ ಭೈರತಿ ಸುರೇಶ್‍ಅವರಿಗೆ ಮನವಿ ಮಾಡಿದರು.
ನಗರದ ರಂಗಮಂದಿರದಲ್ಲಿ ನಡೆದ ಜನತಾದರ್ಶನದಲ್ಲಿ ಈ ಕುರಿತು ಮನವಿ ಮಾಡಿದ ಅವರು, ಸರ್ಕಾರಕ್ಕೆ ಸೇರಿದ 15 ಕೋಟಿ ಮೌಲ್ಯದ ಜಮೀನನನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿರುವ ಈ ಅಧಿಕಾರಿಗಳ ವಿರುದ್ದ ಹಿಂದೆ ದೂರು ನೀಡಿ ಅಮಾನತ್ತಾಗಲು ಕಾರಣರಾಗಿದ್ದ ಶಾಸಕ ನಂಜೇಗೌಡರೇ ಮತ್ತೆ ಕಂದಾಯ ಸಚಿವರಿಗೆ ಶಿಫಾರಸ್ಸು ಮಾಡಿ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಸದರಿ ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಪಿಳ್ಳಪ್ಪ ಬಿನ್ ಮುನಿಸ್ವಾಮಪ್ಪ ಎಂಬುವವರಿಗೆ ಖಾತೆ ಮಾಡಿಕೊಟ್ಟಿದ್ದು, ಅದರ ವಿರುದ್ದ ಕಳೆದ ಜುಲೈ 2020ರಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರೇ ದೂರು ನೀಡಿದ್ದು, ಅದರಂತೆ ಮಾಲೂರು ತಾಹಸೀಲ್ದಾರ್ ಹಾಗೂ ಕೋಲಾರ ವಿಭಾಗಾಧಿಕಾರಿಗಳು ನೀಡಿದ ವರದಿ ಆಧರಿಸಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಸದರಿ ಶ್ರೀಪತಿ ಮತ್ತು ಪ್ರಸಾದ್ ಕುಮಾರ್ ವಿರುದ್ದ ಕಳೆದ ಆಗಸ್ಟ್ 2020 ರಲ್ಲಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಸೂಚಿಸಿ ಇವರನ್ನು ಸೇವೆಯಿಂದ ಅಮಾನತ್ ಮಾಡಲಾಗಿತ್ತು.
ಆದರೆ ಸದರಿ ಪ್ರಕರಣದ ಇಲಾಖಾ ವಿಚಾರಣೆ ಬಾಕಿ ಇರುವಾಗಲೇ ಸದರಿ ಶ್ರೀಪತಿ ಮತ್ತು ಪ್ರಸಾದ್‍ಕುಮಾರ್ ಅವರನ್ನು ಅದೇ ಶಾಸಕ ಕೆ.ವೈ.ನಂಜೇಗೌಡರೇ ವಾಸ್ತವಾಂಶ ಮರೆಮಾಚಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಶಿಫಾರಸ್ಸು ಪತ್ರ ನೀಡಿ ಆಯಾಕಟ್ಟಿನ ಜಾಗವಾದ ಲಕ್ಕೂರಿನ ಕಂದಾಯ ನಿರೀಕ್ಷಕರ ಹುದ್ದೆಗೆ ವರ್ಗಾವಣೆ ಮಾಡಿಸಿದ್ದಾರೆ ಮತ್ತು ಪ್ರಸಾದ್‍ಕುಮರ್‍ರನ್ನು ಮತ್ತೆ ತಹಸೀಲ್ದಾರ್ ಕಚೇರಿಗೆ ವರ್ಗಾವಣೆ ಮಾಡಿಸಿರುವುದು ಅನೇಕ ಅನುಮಾನಗಳಿಗೆ ಎಡೆಮಾಟಿಕೊಟ್ಟಿದೆ.
ಸರ್ಕಾರಿ ಜಮೀನನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿರುವ ಶ್ರೀಪತಿ ಹಾಗೂ ಪ್ರಸಾದ್‍ಕುಮಾರ್ ಅವರ ವರ್ಗಾವಣೆ ರದ್ದುಗೊಳಿಸಿ, ಸದರಿ ವರ್ಗಾವಣೆಗೆ ಪ್ರಮುಖ ಪಾತ್ರ ವಹಿಸಿರುವ ಮಾಲೂರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಮುನೇಗೌಡ ಮತ್ತಿತರರ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ದೊಂಬ್ರಹಳ್ಳಿ ಸ.ನ.173 ಸರ್ಕಾರಿ ಜಮೀನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು ಜಿಪಂ ಸಿಇಒ ಅವರಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.