

ಬೆಂಗಳೂರು, ಏಪ್ರಿಲ್ 8: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2024-25ನೇ ಸಾಲಿನ ರಾಜ್ಯವಲಯ ಮತ್ತು ಜಿಲ್ಲಾವಲಯ ಕಾರ್ಯಕ್ರಮಗಳಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಮುಂದಿನ 2025-26ನೇ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಇಂದು (ಮಂಗಳವಾರ) ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆಯುಕ್ತ ಅಕ್ರಂ ಪಾಷಾ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಮಾಲೋಚನಾ ಸಭೆ ನಡೆಯಿತು.
ಈ ಸಭೆಯಲ್ಲಿ ಇಲಾಖೆಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು, ಯೋಜನಾ ನಿರ್ವಾಹಕರು, ಮತ್ತು ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ, ಪ್ರಸ್ತುತ ಯೋಜನೆಗಳ ಪರಿಣಾಮಕಾರಿತ್ವದ ಬಗ್ಗೆ ಚರ್ಚಿಸಿದರು. 2024-25ನೇ ಸಾಲಿನಲ್ಲಿ ಇಲಾಖೆಯು ವಿವಿಧ ವಿದ್ಯಾರ್ಥಿ ಧನಸಹಾಯ ಯೋಜನೆಗಳು, ವಸತಿನಿಲಯ ನಿರ್ಮಾಣ, ಉದ್ಯೋಗ ತರಬೇತಿ ಕಾರ್ಯಕ್ರಮಗಳು ಹಾಗೂ ಸ್ವಯಂ ಉದ್ಯೋಗ ಪ್ರೋತ್ಸಾಹ ಯೋಜನೆಗಳಲ್ಲಿ ಉತ್ತಮ ಸಾಧನೆ ಗೈದಿರುವ ಬಗ್ಗೆ ಪ್ರಸ್ತುತಪಡಿಸಲಾಯಿತು.
ಅಯುಕ್ತ ಅಕ್ರಂ ಪಾಷಾ ಅವರು ಮಾತನಾಡಿ, “ಹಿಂದುಳಿದ ವರ್ಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯ, ನೌಕರಿ ಮತ್ತು ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯ ಯೋಜನೆಗಳು ಪರಿಣಾಮಕಾರಿಯಾಗಿ ಮುಂದುವರೆಯಬೇಕು. ಎಲ್ಲಾ ಇಲಾಖಾ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಹೆಚ್ಚು ಫಲಪ್ರದ ಫಲಿತಾಂಶಗಳನ್ನು ಪಡೆಯಬಹುದು” ಎಂದು ಹೇಳಿದರು.
2025-26ನೇ ಸಾಲಿಗೆ ನೂತನ ಯೋಜನೆಗಳ ರೂಪರೇಷೆಯ ಬಗ್ಗೆ ಚರ್ಚೆ ನಡೆಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ ಸಿಗುವಂತೆ ಹೊಸ ವಸತಿನಿಲಯ ಯೋಜನೆಗಳು, ಡಿಜಿಟಲ್ ಶಿಕ್ಷಣ, ಮತ್ತು ತರಬೇತಿ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಬೇಕೆಂಬ ನಿರ್ಧಾರವಾಯಿತು. ಜೊತೆಗೆ, ಕಲ್ಯಾಣ ಯೋಜನೆಗಳಲ್ಲಿ ಫಲಾನುಭವಿಗಳ ಪ್ರಾಮಾಣಿಕ ಪರಿಶೀಲನೆ, ನೇರ ಲಾಭಾಂತರಣ ವ್ಯವಸ್ಥೆ (DBT) ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ ಸೂಚನೆ ನೀಡಲಾಯಿತು.
ಸಭೆಯ ಅಂತ್ಯದಲ್ಲಿ, ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಸ್ರೂಟ್ ಮಟ್ಟದಲ್ಲಿ ಜನ ಸಂಪರ್ಕ ಹೆಚ್ಚಿಸಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತೀರ್ಮಾನಿಸಲಾಯಿತು.

