ಪಶು ಆಹಾರ ಬೆಲೆ ಏರಿಕೆ ಆದೇಶ ವಾಪಸ್ ಪಡೆದು, ಹಾಲಿನ ಬೆಲೆ 50ರೂಪಾಯಿ ನಿಗಧಿ ಮಾಡಿ, ಕಲಬೆರಕೆ ತಡೆಯಲು ಜಿಪಿಆರ್‍ಎಸ್ ಅಳವಡಿಸಿ

ಕೋಲಾರ; ಆ.22: ಪಶು ಆಹಾರ ಬೆಲೆ ಏರಿಕೆ ಆದೇಶ ವಾಪಸ್ ಪಡೆದು ಪ್ರತಿ ಲೀಟರ್ ಹಾಲಿನ ಬೆಲೆ 50ರೂಪಾಯಿ ನಿಗಧಿ ಮಾಡಿ ಬಿಎಂಸಿಗಳಲ್ಲಿ ಹಾಲು ಕಲಬೆರಕೆ ತಡೆಯಲು ಜಿಪಿಆರ್‍ಎಸ್ ಅಳವಡಿಸಬೇಕೆಂದು ರೈತಸಂಘದಿಂದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರು ಮಹೇಶ್ ಮನವಿ ನೀಡಿ ಆಗ್ರಹಿಸಲಾಯಿತು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮ ದಿನೇದಿನೇ ದುಬಾರಿಯಾಗುತ್ತಿದೆ. ಒಂದು ಹಸು ಸಾಕಾಣಿಕೆ ಮಾಡಲು ಕನಿಷ್ಠಪಕ್ಷ ತಿಂಗಳಿಗೆ 10 ಸಾವಿರ ರೂಪಾಯಿ ಖರ್ಚು ಬರುತ್ತದೆ. ಆದರೆ, ಒಕ್ಕೂಟ ನೀಡುತ್ತಿರುವ ಹಾಲಿನ ಧರಕ್ಕಿಂತ ಹೆಚ್ಚಾಗಿ ಕೈಯಿಂದ ಬಂಡವಾಳ ಹಾಕುವ ಪರಿಸ್ಥಿತಿ ಇರುವ ಸಮಯದಲ್ಲಿ ಹಾಲು ಒಕ್ಕೂಟ ಒಂದು ರೂಪಾಯಿ ಹಾಲಿನ ಬೆಲೆ ಏರಿಕೆ ಮಾಡಿ ಪಶು ಆಹಾರದ ಬೆಲೆಯನ್ನು ಒಂದು ಮೂಟೆಯ ಮೇಲೆ 70ರೂಪಾಯಿ ಏರಿಕೆ ಮಾಡುವ ಮುಖಾಂತರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಮಳೆ ಆರ್ಭಟಕ್ಕೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಕೈಗೆ ಸಿಗದ ಸಮಯದಲ್ಲಿ ಕುಟುಂಬದ ಜೀವ ಕಾಪಾಡುತ್ತಿದ್ದ ಹಾಲು ಉತ್ಪಾದನೆಗೂ ಮಾರಕವಾಗುವ ನೀತಿಗಳನ್ನು ಒಕ್ಕೂಟ ಜಾರಿಗೊಳಿಸುತ್ತಿದೆ. ಒಂದು ರೂಪಾಯಿ ಬೆಲೆ ಏರಿಕೆಯ ಬೆನ್ನಲ್ಲಿಯೇ ಖಾಸಗಿ ಪಶು ಆಹಾರ ಮಾರಾಟಗಾರರು ನೂರು ರೂಪಾಯಿ ಏರಿಕೆ ಮಾಡುತ್ತಿದ್ದಾರೆ. ಇದರಿಂದ ಕೈಯಿಂದ ಬಂಡವಾಳ ಹಾಕದೇ ರೈತರು ಹೈನೋದ್ಯಮದಿಂದ ವಿಮುಕ್ತಿ ಹೊಂದುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಸರ್ಕಾರ ಲಕ್ಷಾಂತರ ಕುಟುಂಬಗಳನ್ನು ಹಾಳು ಮಾಡುವ ಮದ್ಯಪಾನಕ್ಕೆ ಹೆಚ್ಚಿನ ಆದ್ಯತೆ ನೀಡುವ ಇವರಿಗೆ ಪೌಷ್ಠಿಕತೆ ಮತ್ತು ಜನರ ಆರೋಗ್ಯ ಕಾಪಾಡುವ ಹಾಲಿನ ಬೆಲೆ ಏರಿಕೆ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರ ಕೂಡಲೇ ಲಾಭ ನಷ್ಟದ ಪ್ರಕಾರ ವರದಿ ತರಿಸಿಕೊಂಡು ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಪಕ್ಷ 50 ರೂಪಾಯಿ ನಿಗಧಿ ಮಾಡಿ ಪಶು ಆಹಾರವನ್ನು ಉಚಿತವಾಗಿ ನೀಡುವ ಮುಖಾಂತರ ಹೈನೋದ್ಯಮವನ್ನು ನಂಬಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.


ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾತನಾಡಿ, ಕೋಲಾರ ಜಿಲ್ಲಾದ್ಯಂತ ಬಿಎಂಸಿಗಳಿಂದ ಬರುವ ಹಾಲು ಕಲಬೆರಕೆ ತಡೆಗಟ್ಟಲು ಪ್ರತಿ ಲಾರಿಗೂ ಜಿಪಿಆರ್‍ಎಸ್ ಅಳವಡಿಸುವ ಮೂಲಕ ಕಲಬೆರಕೆ ದಂಧೆಗೆ ಕಡಿವಾಣ ಹಾಕಿ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಬೇಕು. ಹಾಗೂ ಒಕ್ಕೂಟದ ದುಂಧುವೆಚ್ಚಗಳಿಗೆ ಕಡಿವಾಣ ಹಾಕಿ ನಷ್ಟದಲ್ಲಿರುವ ಒಕ್ಕೂಟವನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.


ಸಹಕಾರ ಹಾಲು ಉತ್ಪಾದಕರ ಸಂಘಗಳಿಂದ ಬರುವ ಹಾಲಿನ ಗುಣಮಟ್ಟದ ನೆಪದಲ್ಲಿ ನೋ ಪೇಮೆಂಟ್ ಮೂಲಕ ರೈತರಿಗೆ ಹಾಲಿನ ಬೆಲೆ ನೀಡದೆ ಹಾಲನ್ನು ಒಕ್ಕೂಟವೇ ಇರಿಸಿಕೊಂಡಿರುತ್ತಾರೆ. ಆ ಹಾಲಿನಲ್ಲಿ ಉತ್ಪನ್ನಗಳು ತಯಾರಾಗುತ್ತಿಲ್ಲವೇ. ರೈತರಿಗೆ ಬರೆ ಹಾಕಿ ಒಕ್ಕೂಟ ಲಾಭದಲ್ಲಿ ಹಣವನ್ನು ಉಪಯೋಗಿಸಿಕೊಳ್ಳುತ್ತಿದ್ದು, ಕೂಡಲೇ ರೈತರಿಗೆ ಹಣವನ್ನು ವಾಪಸ್ ನೀಡಬೇಕು. 24 ಗಂಟೆಯಲ್ಲಿ ಏರಿಕೆ ಮಾಡಿರುವ ಪಶು ಆಹಾರದ ಬೆಲೆಯನ್ನು ಇಳಿಕೆ ಮಾಡಿ ಕಲಬೆರಕೆ ತಡೆಗಟ್ಟಲು ಬಿಎಂಸಿಗಳ ಲಾರಿಗಳಿಗೆ ಜಿಪಿಆರ್‍ಎಸ್ ಅಳವಡಿಸಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು.


ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು ಮಹೇಶ್‍ರವರು , ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಫಾರೂಖ್ ಪಾಷ, ಬಂಗಾರಿ ಮಂಜು, ಭಾಸ್ಕರ್, ಸಂತೋಷ್ ಕುಮಾರ್, ಸುನೀಲ್‍ಕುಮಾರ್, ರಾಜೇಶ್, ತೆರ್ನಹಳ್ಳಿ ಆಂಜಿನಪ್ಪ, ಕುವ್ವಣ್ಣ, ವೆಂಕಟೇಶಪ್ಪ, ಅಂಬ್ಲಿಕಲ್ ಮಂಜುನಾಥ್, ಸುಪ್ರೀಂಚಲ, ಮರಗಲ್ ಮುನಿಯಪ್ಪ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್, ಪದ್ಮಮ್ಮ, ವೆಂಕಟಲಕ್ಷ್ಮಮ್ಮ, ವೆಂಕಟಮ್ಮ, ವೇಣು, ಪೊಂಬರಹಳ್ಳಿ ನವೀನ್ ಮುಂತಾದವರಿದ್ದರು.