ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ, ಆ.18: ಜಿಲ್ಲಾದ್ಯಂತ ಕಂದಾಯ ಸರ್ವೇ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಬೇಕೆಂದು ಜಿಲ್ಲೆಗೆ ಆಗಮಿಸಿದ ಪ್ರಾದೇಶಿಕ ಆಯುಕ್ತರಾದ ನವೀನ್ರಾಜ್ ಸಿಂಗ್ ಅವರಿಗೆ ಸಾಮೂಹಿಕ ನಾಯಕತ್ವದ ರೈತಸಂಘದಿಂದ ಮನವಿ ನೀಡಿ ಆಗ್ರಹಿಸಲಾಯಿತು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಜಿಲ್ಲಾದ್ಯಂತ ಕೆರೆ, ರಾಜಕಾಲುವೆ ಗುಂಡುತೋಪುಗಳು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದಾಖಲೆಗಳ ಸಮೇತ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಯುಕ್ತರ ಗಮನಕ್ಕೆ ತಂದರು. ಕಂದಾಯ, ಸರ್ವೇ ಇಲಾಖೆಗಳಲ್ಲಿ ದಲ್ಲಾಳಿಗಳಿಲ್ಲದೆ ರೈತರ ಕೆಲಸವಾಗುತ್ತಿಲ್ಲ. ಒಂದು ಪಹಣಿ ಪಡೆಯಬೇಕಾದರೆ ತಿಂಗಳಾನುಗಟ್ಟಲೆ ಅಲೆಯುವ ಜೊತೆಗೆ ಸರ್ವೇ ಮಾಡಲು ಅರ್ಜಿ ಸಲ್ಲಿಸಿ 6 ತಿಂಗಳಾದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಕೇಳಿದರೆ ಸಿಬ್ಬಂದಿ ಕೊರತೆ ಸರ್ವರ್ ಸಮಸ್ಯೆ ಎಂದು ರೈತರಿಗೆ ಬೇಜವಾಬ್ದಾರಿ ಉತ್ತರ ನೀಡಿ ದಲ್ಲಾಳಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮುಕ್ತವಾದ ಅವಕಾಶವನ್ನು ಕಚೇರಿಗಳಿಗೆ ನೀಡುವ ಮುಖಾಂತರ ಅವರ ಸಮಸ್ಯೆಗಳನ್ನು 24 ಗಂಟೆಯಲ್ಲಿ ಬಗೆಹರಿಸುತ್ತಿದ್ದಾರೆಂದು ಜಿಲ್ಲಾಡಳಿತ ವಿರುದ್ದ ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರದಿಂದ ದರಖಾಸ್ತು ಕಮಿಟಿ ಮುಖಾಂತರ ಮಂಜೂರಾಗಿರುವ ಗೋಮಾಳ ಜಮೀನಿನ ಎಲ್ಲಾ ದಾಖಲೆಗಳಿದ್ದರೂ ಸಹ ಪಿ ನಂಬರ್ ತೆಗೆಯಲು ಪ್ರತಿ ಎಕರೆಗೆ 3-4 ಲಕ್ಷ ಲಂಚ ಕೊಡಬೇಕಾದ ಪರಿಸ್ಥಿತಿಯಿದೆ. ಲಂಚವಿಲ್ಲದೆ ಯಾವುದೇ ಕಡತವು ಕಚೇರಿಗಳಲ್ಲಿ ಕದಲುವುದಿಲ್ಲ. ಒತ್ತಡ ಹಾಕಿದರೆ ಸಿಬ್ಬಂದಿ ಕೊರತೆ ನಾವು ಏನೂ ಮಾಡಲಾಗುವುದಿಲ್ಲವೆಂದು ತಪ್ಪಿಸಿಕೊಳ್ಳುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಜಿಲ್ಲಾದ್ಯಂತ ಜಲಮೂಲಗಳಾದ ಕೆರೆ, ರಾಜಕಾಲುವೆ, ಗುಂಡುತೋಪುಗಳು ರಾತ್ರೋರಾತ್ರಿ ಒತ್ತುವರಿಯಾಗಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬಲಾಢ್ಯರ ಪಾಲಾಗುತ್ತಿವೆ. ಜಲಮೂಲಗಳನ್ನು ಉಳಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಮಾನ್ಯರು ಕೂಡಲೇ ಹೈಕೋರ್ಟ್ ಆದೇಶದಂತೆ ಸರ್ಕಾರಿ ಆಸ್ತಿಗಳನ್ನು ಉಳಿಸಲು ವಿಶೇಷ ತಂಡ ರಚನೆ ಮಾಡಿ ಕಂದಾಯ, ಸರ್ವೇ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಹೈಕೋರ್ಟ ಆದೇಶದಂತೆ ಕೆರೆಗಳನ್ನು ಒತ್ತುವರಿ ತೆರೆವು ಮಾಡಲು ಜಿಲ್ಲಾಧಿಕಾರಿಗಳೊಡನೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಚಂದ್ರಪ್ಪ ಮುಂತಾದವರಿದ್ದರು