ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ದಳಸನೂರು ಗ್ರಾಮದ ಕೆರೆ ಗಡಿ ಗುರ್ತಿಸುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಕೆರೆ ಅಭಿವೃದ್ಧಿ ಕಾರ್ಯ ಅರ್ಧದಲ್ಲಿ ನಿಂತಿದೆ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ದಳಸನೂರು ಗ್ರಾಮದ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿ
ಸರ್ವೆ ನಂಬರ್ 42 ರಲ್ಲಿ 12 ಎಕರೆ ವಿಸ್ತೀರ್ಣದ ಕೆರೆ ಇದೆ. ಕೆಲವು ರೈತರು ಕೆರೆ ಜಮೀನಲ್ಲಿ ಪಹಣಿ ಹೊಂದಿದ್ದರೂ, ಗ್ರಾಮದ ಹಿತದೃಷ್ಟಿಯಿಂದ ಹೂಳು ತೆಗೆಯಲು ಬಿಟ್ಟುಕೊಟ್ಟಿದ್ದಾರೆ. ಆದರೆ ರೈತ ಚಂದ್ರೇಗೌಡ ಅವರು ಮಾತ್ರ ತಮ್ಮ ಹೆಸರಿಗೆ 4 ಎಕರೆ ಪಹಣಿ ಇದೆ ಎಂದು ಹೇಳಿ ಹೂಳು ತೆಗೆಯಲು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಕೆರೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆದ್ದರಿಂದ ಕೆರೆ ಗಡಿ ಗುರುತಿಸಿ ಕೊಡುವಂತೆ ತಹಶೀಲ್ದಾರರನ್ನು ಕೋರಲಾಗಿತ್ತು. ಕಂದಾಯ ನಿರೀಕ್ಷಕರು ಕೆರೆಗೆ ಭೇಟಿ ನೀಡಿ ಹೋದರು. ಕೆರೆ ಅಳೆಯಲು ಮಾತ್ರ ಯಾರೂ ಬರಲಿಲ್ಲ ಎಂದು ಹೇಳಿದರು.
ಕೆರೆ ಅಭಿವೃದ್ದಿ ಪಕ್ಷಾತೀತವಾಗಿ ನಡೆಯುತ್ತಿದೆ. ಅದಕ್ಕೆ ಇರುವ ಅಡ್ಡಿ ಆತಂಕ ನಿವಾರಣೆ ಮಾಡಬೇಕಾಗಿದೆ. ತಡ ಮಾಡಿದಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ಕಾಲ್ನಡಿಗೆ ಜಾಥಾ ಕೈಗೊಳ್ಳಲಾಗುವುದು. ತಾಲ್ಲೂಕು ಕಚೇರಿ ಎದರುರು ಪ್ರತಿಭಟನೆ ನಡೆಸಲಾಗುವುದು. ಸಮಸ್ಯೆ ಬಗೆಹರಿಸುವಲ್ಲಿ ಸಂಬಂಧ ಅಧಿಕಾರಿಗಳು ವಿಫಲರಾದರೆ ಕೆರೆ ಅಭಿವೃದ್ದಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಕೆರೆಗೆ ಭೇಟಿ ನೀಡಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಕಾಮಗಾರಿ ಮುಂದುವರಿಸಲು ಉಂಟಾಗಿರುವ ಸಮಸ್ಯೆ ಕುರಿತು ಚರ್ಚಿಸಿದರು.
ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಮ್ಮ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯದರ್ಶಿ ವೀರಭದ್ರಸ್ವಾಮಿ, ಮುಖಂಡರಾದ ಚಲಪತಿ, ಶಶಿಕುಮಾರ್, ಜಗದೀಶ್, ವಿಶ್ವನಾಥ್, ಶ್ರೀನಿವಾಸಗೌಡ, ರಹಮತ್, ಶಿವಾರೆಡ್ಡಿ, ಭಾರತಿ ನಾರಾಯಣಸ್ವಾಮಿ, ಹರಿಪ್ರಸಾದ್ ಇದ್ದರು.