ಕೋಲಾರ:- ಸೇವೆ ಹಾಗೂ ರಾಷ್ಟ್ರಭಕ್ತಿಯ ಮಾನವ ಸಂಪನ್ಮೂಲ ವೃದ್ದಿಗೆ ಮೀಸಲಾಗಬೇಕಾದ ಶಿಕ್ಷಕ ಮತ್ತು ವೈದ್ಯ ವೃತ್ತಿ ವ್ಯಾಪಾರವಾಗಿಬಿಟ್ಟರೆ ದೇಶ ಉಳಿಯುವುದಿಲ್ಲ, ಸಮಾಜ ಅಧೋಗತಿಗೆ ನೂಕಲ್ಪಡುತ್ತದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಶ್ರೀಕೋಲಾರಮ್ಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ 41 ವರ್ಷಗಳ ಸಾರ್ಥಕ ಸೇವೆ ನಂತರ ನಿವೃತ್ತರಾಗಿರುವ ಶಿಕ್ಷಕಿ ವೀಣಾರತ್ಮಮ್ಮ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಕ,ವೈದ್ಯ ಕೇವಲ ಹಣಕ್ಕೆ ಆಸೆಪಟ್ಟರೆ ದೇಶ ಉಳಿಯುವುದಿಲ್ಲ, ಈ ಎರಡೂ ವೃತ್ತಿ ಪ್ರಾಮಾಣಿಕವಾಗಿದ್ದರೆ ಮಾತ್ರ ದೇಶ,ಸಮಾಜ ಭದ್ರಗೊಳ್ಳಲು ಸಾಧ್ಯ ಎಂದ ಅವರು, ಮಕ್ಕಳ ಮನಸ್ಸಿಗೆ ಹತ್ತಿರವಾಗಿರೋದು ಶಿಕ್ಷಕರು ಮಾತ್ರ, ಅವರ ಮಾರ್ಗದರ್ಶನವಿಲ್ಲದಿದ್ದರೆ ದೇಶದ ಆಸ್ತಿಯಾಗಬೇಕಾದ ಯುವಶಕ್ತಿ ದಾರಿತಪ್ಪದಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಮತ್ತಷ್ಟು ಬಲಗೊಳ್ಳಬೇಕಾಗಿದೆ, ಇಲ್ಲವಾದಲ್ಲಿ ಬಡವರಿಗೆ ಶಿಕ್ಷಣ ಮರೀಚಿಕೆಯಾಗಲಿದೆ ಎಂದು ಎಚ್ಚರಿಸಿದ ಅವರು, 41 ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ ವೀಣಾರತ್ನಮ್ಮ ಅವರ ಸಾರ್ಥಕ ಸೇವೆಯಲ್ಲಿ ಸಾವಿರಾರು ಮಕ್ಕಳು ಶೈಕ್ಷಣಿಕವಾಗಿ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದರು.
ವೀಣಾರತ್ಮಮ್ಮ ಅವರ ಪತಿ ನಾರಾಯಣಪ್ಪ ನಮ್ಮೂರಾದ ಬ್ಯಾಲಹಳ್ಳಿಯಲ್ಲಿ 19 ವರ್ಷ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ದಿಗೆ ನೀಡಿದ ಕೊಡಗೆ ಮರೆಯಲು ಸಾಧ್ಯವಿಲ್ಲ, ಸಮಯಪ್ರಜ್ಞೆ, ಬದ್ದತೆ ಶಿಕ್ಷಕರಲ್ಲಿ ಇದ್ದರೆ ಮಾತ್ರ ಸರ್ಕಾರಿ ಶಾಲೆ ಉಳಿಯಲು ಸಾಧ್ಯ ಎಂಬುದಕ್ಕೆ ಇವರು ಆದರ್ಶರಾಗಿದ್ದಾರೆ ಎಂದು ಅಭಿನಂದಿಸಿದರು.
ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಶಿಕ್ಷಕ ಹುದ್ದೆ ಮಾತ್ರ ಮಹೋನ್ನತ, ಸಮಾಜಕ್ಕೆ ಅಪಾರ ಮಾನವ ಸಂಪನ್ಮೂಲವನ್ನು ಕೊಡುಗೆಯಾಗಿ ನೀಡುವ ಶಿಕ್ಷಕ ನಿವೃತ್ತಿಯ ನಂತರವೂ ಗೌರವಕ್ಕೆ ಪಾತ್ರನಾಗುತ್ತಾನೆ ಎಂದ ಅವರು,ಶಿಕ್ಷಕ ವೃತ್ತಿಗೆ ಬೆಲೆ ಕಟ್ಟಲಾಗದು, ವೃತ್ತಿ ಘನತೆ ಎತ್ತಿಹಿಡಿದಿರುವ ವೀಣಾರತ್ನಮ್ಮ,ನಾರಾಯಣಪ್ಪ ಶಿಕ್ಷಕ ದಂಪತಿಗಳು ಇನ್ನೂ ನೂರ್ಕಾಲ ಬಾಳಲಿ ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.
ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ಅಂಕ ಮಾತ್ರ ಮಗುವಿನ ಜ್ಞಾನಕ್ಕೆ ಮಾನದಂಡವಲ್ಲ, ಮಕ್ಕಳಿಗೆ ಒತ್ತಡ ಹಾಕದಿರಿ ಅವರ ಆಶಯಕ್ಕೆ ತಕ್ಕಂತೆ ಕಲಿಕೆ ಮುಂದುವರೆಸಿ, ಚೆನ್ನಾಗಿ ಓದಿಸಿದರೆ ಫಾರಿನ್ ಹೋಗುತ್ತಾರೆ ಆದ್ದರಿಂದಲೇ ಇಲ್ಲಿ ವೃದ್ದಾಶ್ರಮಗಳು ಹೆಚ್ಚುತ್ತಿವೆ, ಪೋಷಕರ ಮಾನಸಿಕ ಆರೋಗ್ಯವೂ ನಾಶವಾಗುತ್ತದೆ ಎಂದು ತಿಳಿಸಿ, ಪಾಠದ ಜತೆ ಮೌಲ್ಯಗಳ ಕಲಿಕೆಯೂ ಅಗತ್ಯವಿದೆ ಎಂದರು.
ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ, ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಅಗತ್ಯವಿಲ್ಲ ಏಕೆಂದರೆ ಈ ದೇಶದ ಎಲ್ಲಾ ಸಾಧಕರು ಅಲ್ಲೇ ಓದಿದವರು, 41 ವರ್ಷಗಳ ಸಾರ್ಥಕ ಸೇವೆಯ ಮೂಲಕ ಅಪಾರ ಶಿಷ್ಯವೃಂದದ ಗೌರವಕ್ಕೆ ಪಾತ್ರರಾಗಿರುವ ವೀಣಾರತ್ಮಮ್ಮ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಅಬಕಾರಿ ಇಲಾಖೆ ನಿವೃತ್ತ ನಿರೀಕ್ಷಕ ಜಯರಾಂ, ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸಹಕಾರಿ ಇಲಾಖೆಯ ಜಗದೀಶ್, ಶಿಕ್ಷಕ ಮುಖಂಡ ಮುಕುಂದ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದ್ದ, ಸಮಾಜ,ದೇಶಕ್ಕೆ ಅಗತ್ಯವಾದ ರಾಷ್ಟ್ರಪ್ರೇಮ ಇರುವ ಮಾನವ ಸಂಪನ್ಮೂಲ ನೀಡುವ ಶಿಕ್ಷಕರು ದಾರಿತಪ್ಪಿದರೆ ಸಮಾಜ ಉಳಿಯದು ಎಂದು ತಿಳಿಸಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿದ ವೀಣಾರತ್ನಮ್ಮ, ನನಗೆ ನನ್ನ ಶಿಕ್ಷಕ ವೃತ್ತಿಯೇ ಅತಿ ಪವಿತ್ರ, ನನ್ನೆಲ್ಲಾ ಕಷ್ಟಗಳನ್ನು ಶಾಲೆಗೆ ಹೋಗಿ ಮಕ್ಕಳನ್ನು ನೋಡುತ್ತಲೇ ಮರೆಯುತ್ತಿದೆ, ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ, ದೇವರಂತಿರುವ ಮಕ್ಕಳಿಗೆ ಬೋಧನೆ ಮಾಡಿದರೆ ಸಾಕು ಎಂದು ನಂಬಿದ್ದೆ, ಇನ್ನೂ ಹೋಗುವಂತಿಲ್ಲ ಎಂದು ಭಾವುಕರಾದರು.
ಅಧ್ಯಕ್ಷತೆಯನ್ನು ಕೋಲಾರಮ್ಮ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ ಅಧ್ಯಕ್ಷ ನಾರಾಯಣಪ್ಪ ವಹಿಸಿದ್ದು, ಉಪಾಧ್ಯಕ್ಷರೂ ಹಾಗೂ ನಿವೃತ್ತ ಶಿಕ್ಷಕರೂ ಆಗಿರುವ ನಾರಾಯಣಪ್ಪ, ಬ್ಯಾಲಹಳ್ಳಿಯಲ್ಲಿ ಕೆಲಸ ಮಾಡಿದ ತಮ್ಮ ಅನುಭವ ಹಂಚಿಕೊಂಡು, ಗೋವಿಂದಗೌಡರು ಸರ್ಕಾರಿ ಶಾಲೆ ಅಭಿವೃದ್ದಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ 35 ವರ್ಷಗಳ ಕಾಲ ಬೆಗ್ಲಿ ಸರ್ಕಾರಿ ಶಾಲೆಯಲ್ಲಿ ಹಾಗೂ ನಂತರದ 6 ವರ್ಷ ಗಾಂಧಿನಗರದಲ್ಲಿ ಶಿಕ್ಷಕರಾಗಿ ಇದೀಗ ನಿವೃತ್ತರಾದ ವೀಣಾರತ್ಮಮ್ಮ ಹಾಗೂ ನಾರಾಯಣಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೋರ್ಟ್ ಶಿರಸ್ತೇದಾರ್ ಮುನಿಯಪ್ಪ,ಸೊಸೈಟಿ ಸಿಇಒ ಶಿವರಾಜ್ಕುಮಾರ್, ಪ್ರಸಾದ್, ನಿರ್ದೇಶಕರಾದ ಅಶ್ವಥ್ಥನಾರಾಯಣಗೌಡ, ಡಾ.ಉದಯಕುಮಾರ್,ಶಿವಕುಮಾರ್, ವೆಂಕಟಾಚಲಪತಿ, ಮುನಿರಾಮಯ್ಯ, ಚಲಪತಿ,ನಾಗೇಂದ್ರಸಿಂಗ್, ಮನೋಹರ,ಸಾವಿತ್ರಮ್ಮ, ಲಕ್ಷ್ಮಿ ಮತ್ತಿತರರಿದ್ದರು.